ಅನುದಾನರಹಿತ ಶಿಕ್ಷಕರಿಗೆ ಪ್ಯಾಕೇಜ್ ಘೋಷಿಸಿ: ಮಿಟ್ಟಲಕೋಡ

ಬಾದಾಮಿ,ಮೇ 30: ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟದಲ್ಲಿರುವ ಅನುದಾನರಹಿತ ಶಿಕ್ಷಕರು ಮತ್ತು ಶಿಕ್ಷಕೇತರರಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹಾಗೂ ಹಕ್ಕಾಪಿಕ್ಕಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಚೇರಮನ್ ವಿರುಪಾಕ್ಷಿ ಮಿಟ್ಟಲಕೋಡ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶಕುಮಾರ ಅವರನ್ನು ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ಅನುದಾನರಹಿತ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರರು ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಇದನ್ನು ಗಮನಿಸಿ ಸರಕಾರ ಕೂಡಲೇ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಆರ್ಥಿಕ ನೆರವು ಘೋಷಣೆ ಮಾಡಬೇಕು. ಸರಕಾರ, ಅನುದಾನಿತ, ಅನುದಾನರಹಿತ ಎಂದು ಬೇಧ ಭಾವ ಮಾಡದೇ ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಬಿಸಿಯೂಟವನ್ನು ಇದೇ ವರ್ಷದಿಂದ ನೀಡಬೇಕು.
1995 ರಿಂದ 2010 ರ ವರೆಗೆ ಆರಂಭವಾಗಿರುವ ಅನುದಾನರಹಿತ ಶಾಲೆಗಳಿಗೆ ಅನುದಾನಕ್ಕೆ ಒಳಪಡಿಸಿ ಬಡಶಿಕ್ಷಕರ ಜೀವನಕ್ಕೆ ದಾರಿ ಮಾಡಿಕೊಡಬೇಕು. ಈ ಹಿಂದೆ ಅನುದಾನರಹಿತ ಶಾಲೆಗಳಲ್ಲಿ ಆರ್.ಟಿ.ಇ.ಪ್ರವೇಶಕ್ಕೆ ಅವಕಾಶ ಇತ್ತು. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಕೋಟಾದಲ್ಲಿ ಪ್ರವೇಶ ಪಡೆಯುವುದನ್ನು ರದ್ದುಪಡಿಸಿದರು. ಇದರಿಂದ ಬಡವಿದ್ಯಾರ್ಥಿಗಳಿಗೆ ಅನ್ಯಾಯವಾಯಿತು. ಈ ಹಿಂದೆ ಇರುವಂತೆ ಆರ್.ಟಿ.ಇ.ಪ್ರವೇಶ ಪಡೆಯಲು ಅವಕಾಶ ಮಾಡಿಕೊಡಬೇಕು. ಕೋವಿಡ್ ನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಅನುದಾನರಹಿತ ಶಾಲಾ ಶಿಕ್ಷಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡ್ಡಿರಹಿತ ಸಾಲ ಸೌಲಭ್ಯಗಳನ್ನು ಒದಗಿಸಿ ಕಂತುಗಳನ್ನು ಸಾಲ ಮರುಪಾವತಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ತಾ.ಪಂ.ಸದಸ್ಯ ಅಂದಾನಗೌಡ ಪಾಟೀಲ, ಗ್ರಾ.ಪಂ.ಸದಸ್ಯ ಮಾರುತಿ ತಳವಾರ, ನಾಗನಗೌಡ ಪಾಟೀಲ ಹಾಜರಿದ್ದರು.