ಅನುದಾನರಹಿತ ಶಿಕ್ಷಕರಿಗೆ ಟಿಬಿಎಫ್ ಅಜೀವ ಸದಸ್ಯತ್ವ:ಸುರೇಶ್ ಕುಮಾರ್

ಬೆಂಗಳೂರು, ಮಾ.23- ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಅಜೀವ ಸದಸ್ಯರನ್ನಾಗಿ ನೇಮಕ  ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ  ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘ ಹಾಗೂ ವಿವಿಧ  ಶಿಕ್ಷಕ ಸಂಘಟನೆಗಳ ಹೋರಾಟ ಸಮನ್ವಯ ಸಮಿತಿಯಲ್ಲಿ ಅವರು ಮಾತನಾಡಿದರು.

ಕೊರೋನಾದಂತಹ ಸಂಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಕರು ತೀವ್ರ ಸಂಕಷ್ಟ ಅನುಭವಿಸಿದ್ದರಿಂದಾಗಿ ಎಲ್ಲ ಶಿಕ್ಷಕರಂತೆ ಕಷ್ಟಕಾಲದ ತತ್ಕ್ಷಣದ ನೆರವಿಗೆ ಶಿಕ್ಷಣ ನಿಧಿಯ ಸದಸ್ಯತ್ವ ನೀಡಿ ಆ ಮೂಲಕ ನಿಧಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರಿಗೆ ದೊರೆಯುವ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.

ಶಿಕ್ಷಕರೆಂದರೆ ಎಲ್ಲರೂ ಶಿಕ್ಷಕರೇ, ಎಲ್ಲರೂ ನಮ್ಮ ಮಕ್ಕಳ ಹಿತಕ್ಕೆ ದುಡಿಯುತ್ತಾರೆ.  ಅದರಲ್ಲಿ ಎರಡು ಮಾತೇ ಇಲ್ಲ, ಹೀಗಿರುವಾಗ ಶಿಕ್ಷಕರ ಕಲ್ಯಾಣ ನಿಧಿಗೆ ಖಾಸಗಿ ಅನುದಾನ ರಹಿತ ಸಂಸ್ಥೆಗಳ ಶಿಕ್ಷಕರನ್ನು ಯಾವ ರೀತಿಯಲ್ಲಿ ಹಾಗೆಯೇ ಯಾವ ಮಾನದಂಡದ ಮೂಲಕ  ಸದಸ್ಯತ್ವ ನೀಡುವ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಇದು ಅಧಿಕೃತಗೊಳ್ಳಲಿದೆ ಎಂದು ಸಚಿವರು ಹೇಳಿದರು.

ಈಗಾಗಲೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಸದಸ್ಯತ್ವ ನೀಡುವ ಕುರಿತು ರೂಪಿಸಿರುವ ನಿಯಮಗಳನ್ನು ವಿಸ್ತೃತವಾಗಿ ಅವಲೋಕಿಸಿ ಅಂತಿಮಗೊಳಿಸ‌ ಲಾಗುವುದೆಂದು  ಎಂದು ಸುರೇಶ್ ಕುಮಾರ್ ತಿಳಿಸಿದರು.

ಅನುದಾನ:ಶಿಕ್ಷಣ ಕ್ಷೇತ್ರದ ಪ್ರಮುಖ ಬೇಡಿಕೆಯಾದ ಖಾಸಗಿ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ.

ಬಜೆಟ್ ಪೂರ್ವಭಾವಿ ಸಭೆಯಲ್ಲಿಯೂ ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಸಿಎಂ ಅವರಿಗೆ ಪ್ರಮುಖವಾಗಿ ಇದನ್ನು ಪರಿಗಣಿಸಬೇಕೆಂದು ಕೋರಿದ್ದೆ. ಕೋವಿಡ್ ಸಂಕಷ್ಟದ ಸಮಯವಾದ್ದರಿಂದ ಬಜೆಟ್ ನಲ್ಲಿ ಅದಕ್ಕೆ ಅನುದಾನ ಹಂಚಿಕೆಯಾಗಿಲ್ಲ. ಆ ನಂತರವೂ ನಾನು ಸಿಎಂ ಅವರೊಂದಿಗೆ ಚರ್ಚಿಸಿದ್ದು ಪೂರಕ ಬಜೆಟ್ ನಲ್ಲಿ ಅನುದಾನ ಹಂಚಿಕೆ ಮಾಡಿ ಬಜೆಟ್ ಕುರಿತ ಚರ್ಚೆಯಲ್ಲಿ ಕನಿಷ್ಠ ಐದು ವರ್ಷದ ಅಂದರೆ 

1995-2000ವರೆಗಿನ ಶಾಲೆಗಳಿಗೆ ಅನುದಾನ ನೀಡುವ ಘೋಷಣೆ ಮಾಡಬೇಕೆಂದು ಕೋರಿದ್ದೇನೆ.  ಈ ಕುರಿತು ಮತ್ತೊಮ್ಮೆ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ಸ್ಪಷ್ಟವಾದ ಭರವಸೆ ಪಡೆಯುವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

1995 ರಿಂದ 2000 ವರೆಗಿನ 5 ವರ್ಷಗಳ ಅವಧಿಯಲ್ಲಿ 685 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಮತ್ತು 211 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳು ಇದ್ದು, ಅವುಗಳನ್ನು ಅನುದಾನಕ್ಕೊಳಡಪಡಿಸುವ ನಿಟ್ಟಿನಲ್ಲಿ 138.39 ಕೋಟಿ ರೂ.ಗಳ ಹಣದ ಅಗತ್ಯವಿರುವುದನ್ನು ಇಲಾಖೆ ಅಂದಾಜಿಸಿದೆ ಎಂದು ಸಚಿವರು ತಿಳಿಸಿದರು.

ಸಂಜೀವಿನಿ ವಿಸ್ತರಣೆ:ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲಾ ಸಿಬ್ಬಂದಿಗೂ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶದಿಂದ ಜ್ಯೋತಿ ಸಂಜೀವಿನಿ ವ್ಯಾಪ್ತಿಗೆ ಒಳಪಡಿಸುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಎಚ್. ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಇಲಾಖೆಯ ಅಧಿಕಾರಿಗಳಾದ ಕುಮಾರ ನಾಯಕ್, ವಿ. ಅನ್ಬುಕುಮಾರ್, ಸ್ನೇಹಲ್  ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್, ರೂಪ್ಸಾ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.