ಅನುದಾನದ ಬಗ್ಗೆ ಸುಳ್ಳು ಹರಡುವುದನ್ನು ನಿಲ್ಲಿಸಬೇಕು: ಅಶ್ವಿನ್ ಕುಮಾರ್

ತಿ.ನರಸೀಪುರ: ಮಾ.14:- ಕ್ಷೇತ್ರ ಅಭಿವೃದ್ಧಿಗೆ ತರುವ ಅನುದಾನವನ್ನು ಯಾರು ಕೂಡ ತಮ್ಮ ಮನೆಯಿಂದ ತರುವುದಿಲ್ಲ ,ಅದು ಸಾರ್ವಜನಿಕರ ತೆರಿಗೆ ಹಣ.ಹಾಗಾಗಿ ಕ್ಷೇತ್ರದ ಅಭಿವೃದ್ಧಿಯ ಅನುದಾನದ ವಿಚಾರದಲ್ಲಿ ಸುಳ್ಳುಸುದ್ದಿ ಹರಡುವುದನ್ನು ನಿಲ್ಲಿಸುವಂತೆ ಶಾಸಕ ಎಂ.ಅಶ್ವಿನ್ ಕುಮಾರ್ ಕಿಡಿಕಾರಿದರು.
ತಾಲೂಕಿನ ಬನ್ನೂರು ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ “ಪಂಚರತ್ನ “ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕರು ಮಾತನಾಡಿದರು.ಹಲವರು ಕ್ಷೇತ್ರಕ್ಕೆ ತಂದಿರುವ ಅನುದಾನದ ಬಗ್ಗೆ ಪದೇ ಪದೇ ಚರ್ಚೆ ಮಾಡುತ್ತಿದ್ದು,ಕ್ಷೇತ್ರದ ಅಭಿವೃದ್ಧಿಗೆ ಅವರು ತಮ್ಮ ಸ್ವಂತ ಹಣವನ್ನೇನು ತಂದು ಖರ್ಚು ಮಾಡಿಲ್ಲ, ಜನರ ತೆರಿಗೆ ಹಣವನ್ನು ಬಳಸಿದ್ದಾರೆ. ಎಲ್ಲ ಶಾಸಕರು ಸಾರ್ವಜನಿಕರ ತೆರಿಗೆ ಹಣವನ್ನು ಅನುದಾನದ ರೂಪದಲ್ಲಿ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ.ನಾನು ತಂದಿರುವ ಅನುದಾನದ ಬಗ್ಗೆ ನನಗೆ ಮತ್ತು ಸಾರ್ವಜನಿಕರಿಗೆ ತೃಪ್ತಿಯಿದೆ.ಈ ಬಗ್ಗೆ ಯಾವುದೇ ಪಕ್ಷದ ವ್ಯಕ್ತಿಗಳನ್ನು ಮೆಚ್ಚಿಸುವ ಅಗತ್ಯತೆ ನನಗೆ ಇಲ್ಲ ಎಂದರು.
ಬನ್ನೂರು ಭಾಗದಲ್ಲಿ ಜೆಡಿಎಸ್ ಪಕ್ಷದ ಪ್ರಾಬಲ್ಯ ಕುಂದಿದೆ ಎಂದು ಇತರೆ ಪಕ್ಷದ ನಾಯಕರು ಬೊಬ್ಬೆ ಹೊಡೆಯುತ್ತಿದ್ದು,ಇಂದಿನ ಸಭೆ ಅವರ ಆರೋಪಗಳಿಗೆ ಪ್ರತ್ಯುತ್ತರ ನೀಡಿದೆ.ಅಲ್ಲದೆ ಕ್ಷೇತ್ರದ ಎಲ್ಲ ಜನತೆಯ ಆಶೀರ್ವಾದ ಜೆಡಿಎಸ್ ಪಕ್ಷದ ಮೇಲೆ ಇದೆ ಎಂದರು.
ನಮ್ಮ ಕ್ಷೇತ್ರದಲ್ಲಿ ಇದೇ 19ರಂದು ನಡೆಯಲಿರುವ ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಚ್ಚು ಭಾಗವಹಿಸಿ ,ರೈತಬಂಧುಗಳು ಕುಮಾರಣ್ಣನವರಿಗೆ ರೈತ ಸ್ವಾಗತವನ್ನು ಕೋರಬೇಕು.ಅಲ್ಲದೆ,ಅಂದು ಸೇರುವ ಜನ ಸಾಗರ
ರಾಜ್ಯ ಮತ್ತು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ವಾಗ್ದಾನವನ್ನು ಅವರಿಗೆ ನೀಡಬೇಕಿದೆ ಎಂದರು.
ಪಂಚರತ್ನ ಯಾತ್ರೆಯು ಮಡವಾಡಿ ಗ್ರಾಮದಿಂದ ಆರಂಭಗೊಂಡು ತಲಕಾಡು,ಹೊಳೆಸಾಲು,ಹೆಮ್ಮಿಗೆ,ಮಾದಾಪುರ ,ಮೂಗೂರು ,ಕುರುಬೂರು,ತಿ.ನರಸೀಪುರ ಪಟ್ಟಣ ,ಸೋಸಲೆ ,ಸೋಮನಾಥಪುರ ಮಾರ್ಗವಾಗಿ ಬನ್ನೂರು ತಲುಪಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರೆವಣಿಗೆ ನಡೆಸಿ ಫುಟ್ ಬಾಲ್ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ.ಅಂದು ಬೃಹತ್ ಸಭೆಯನ್ನುದ್ದೇಶಿಸಿ ಕುಮಾರಣ್ಣನ ಮಾತನಾಡಲಿದ್ದಾರೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹೋಟೆಲ್ ರಾಮಸ್ವಾಮಿ ಮಾತನಾಡಿ,ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಕರ್ನಾಟಕದ ಜನತೆಯ ದುಃಖ ದುಮ್ಮಾನಗಳ ಅರಿವಿದೆ.ಹಾಗಾಗಿ ಕುಮಾರಸ್ವಾಮಿಯವರು ರೈತರ ಸಾಲಮನ್ನಾ ಮಾಡಿದ್ದಲ್ಲದೆ ಈಗ ಬಹುನಿರೀಕ್ಷಿತ ಪಂಚರತ್ನ ಯೋಜನೆಯನ್ನು ಜಾರಿಗೆ ತರುವ ಮಹದಾಸೆ ಹೊಂದಿದ್ದಾರೆ.
ರಾಜ್ಯದ ಜನತೆ ಅವರ ಆಕಾಂಕ್ಷೆಗೆ ನೀರೆರೆಯಬೇಕು.ಆಗ ಮಾತ್ರ ಕರ್ನಾಟಕ ಕಲ್ಯಾಣ ರಾಜ್ಯ ಆಗಲಿದೆ ಎಂದರು.
ಸಭೆಯಲ್ಲಿ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ತುರುಗನೂರು ಮಂಜುನಾಥ್,ಜಿ.ಪಂ. ಮಾಜಿ ಸದಸ್ಯ ಜಯಪಾಲಭರಣಿ, ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗೊರವನಹಳ್ಳಿ ನಾಗರಾಜು,ಬನ್ನೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಕೆ.ಕುಮಾರಸ್ವಾಮಿ,ಪುರಸಭೆ ಉಪಾಧ್ಯಕ್ಷೆ ಸೌಭಾಗ್ಯ, ಮಾಜಿ ಎಪಿಎಂಸಿ ಅಧ್ಯಕ್ಷ ಬಸವನಹಳ್ಳಿ ವೆಂಕಟೇಶ್,ಕೊಡಗಹಳ್ಳಿ ಗ್ರಾಪಂ ಅಧ್ಯಕ್ಷ ಧನಂಜಯ(ಪಾಪಣ್ಣ) ,ಫೈಲ್ವಾನ್ ಚಂದ್ರು,ಪ್ರೀತಮ್,ಮಾಜಿ ಅಧ್ಯಕ್ಷ ಬಸವನಹಳ್ಳಿ ರಾಜು,ಗುತ್ತಿಗೆದಾರ ನಾಗರಾಜು,ಸಿದ್ದರಾಜು.ರಾಜೇಶ್ ಇತರರು ಹಾಜರಿದ್ದರು.