ಅನುದಾನದ ಕೊರತೆ ಇಲ್ಲ: ಶಾಸಕ ಅಬ್ಬಯ್ಯ

ಹುಬ್ಬಳ್ಳಿ,ಫೆ13: ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಅಧಿಕಾರಿಗಳು ಜನರಿಗೆ ಸೌಲಭ್ಯ ಒದಗಿಸುವ ಕಾರ್ಯ ಮಾಡಬೇಕು. ಅದರಲ್ಲೂ ಸ್ಲಮ್ ಪ್ರದೇಶಗಳಲ್ಲಿ ಯಾವುದೇ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಪೂರ್ವ ಕ್ಷೇತ್ರದ ಶಾಸಕರಾದ ಪ್ರಸಾದ ಅಬ್ಬಯ್ಯ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅವರು, ತಮ್ಮ ಗೃಹ ಕಚೇರಿಯಲ್ಲಿ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾಸಬೇಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿಗಳು ಇದೇ 24ರಂದು ಆಶ್ರಯ ಮನೆಗಳ ಲೋಕಾರ್ಪಣೆ ಮಾಡುವ ಬಗ್ಗೆ ಮಾಹಿತಿ ಇದೆ. ಇಲ್ಲಿನ ಮಂಟೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಈಗಾಗಲೇ ಅನೇಕಬಾರಿ ಸೂಚಿನೆ ನೀಡಿದ್ದರೂ ಅಧಿಕಾರಿಗಳು ಗುತ್ತಿಗೆದಾರರ ನಿರ್ಲಕ್ಷ?ಯದಿಂದ ಕಾಮಗಾರಿ ವಿಳಂಬವಾಗುತ್ತಲೇ ಇದೆ. ಇನ್ನು ಸಹಿಸಲಾಗದು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಧಿಕಾರಿಗಳ ವಿರುದ್ಧವೂ ಸಹ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶೀಘ್ರದಲ್ಲೆ ಮೊದಲ ಹಂತದ 1300ಮನೆಗಳನ್ನು ಪೂರ್ಣಗೊಳಿಸಬೇಕು. ಅವುಗಳಿಗೆ ಅವಶ್ಯವಿರುವ ರಸ್ತೆ, ವಿದ್ಯುತ್ ಸಂಪರ್ಕ ಮತ್ತು ನೀರುಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಸಮರೋಪಾದಿಯಲ್ಲಿ ಕಾಮಗಾರಿ ಕೈಗೊಂಡು ಫಲಾನುಭವಿಗಳಿಗೆ ಹಂಚಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಲಮ್ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು.
20ಕೋಟಿಯಲ್ಲಿ ಹಳೆ ಹುಬ್ಬಳ್ಳಿ ಮಾರುಕಟ್ಟೆ ಅಭಿವೃದ್ಧಿ
ಈ ಹಿಂದೆ ಕೈ ಬಿಡಲಾಗಿದ್ದ ಹಳೆ ದುರ್ಗದಬೈಲ್ ಮಾರುಕಟ್ಟೆ ಅಭಿವೃದ್ಧಿ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರಸ್ತುತ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. 20ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಒಳಚರಂಡಿ ಅಭಿವೃದ್ಧಿಗೆ 80ಕೋಟಿ ರೂ. ಅನುದಾನ
ಪೂರ್ವ ಕ್ಷೇತ್ರದಲ್ಲಿ ಭವಿಷ್ಯದ ಯೋಜನೆ ಇಟ್ಟುಕೊಂಡು ಒಳಚರಂಡಿ ಸಮಸ್ಯೆ ಇನ್ಯಾವತ್ತು ತಲೆದೂರದಂತೆ ದೊಡ್ಡ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಸಿದ್ಧವಾಗಿದೆ. ಅಂದಾಜು 80ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಾದ್ಯಂತೆ ಒಳಚರಂಡಿ ವ್ಯವಸ್ಥೆಗೆ ಸರ್ಕಾರ ಅಸ್ತು ಎಂದಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಒಳಚರಂಡಿ ದುರಸ್ತಿಗೆ ಹೆಚ್ಚಿನ ಒತ್ತು ನೀಡಿ ಯೋಜನೆ ಸಮರ್ಪಕ ಅನುಷ್ಠಾನ ಮತ್ತು ಯಶಸ್ಸಿಗೆ ಶ್ರಮಿಸಬೇಕೆಂದು ಶಾಸಕರು ಹೇಳಿದರು.
ಪ್ರತಿಬಾರಿಯೂ ನಗರದ ಅಭಿವೃದ್ಧಿಗೆ ಪಾಲಿಕಯಲ್ಲಿ ಆದಾಯದ ಕೊರತೆ ಇದೆ ಎಂಬ ಸಿದ್ಧ ಉತ್ತರವನ್ನು ಬಿಟ್ಟುಬಿಡಿ. ಬದಲಾಗಿ ಆದಾಯ ವೃದ್ಧಿಗೆ ಯೋಜನೆ ರೂಪಿಸಬೇಕು. ಪಾಲಿಕೆ ಒಡೆತನದ ಶಿಥಿಲಾವಸ್ಥೆಯಲ್ಲಿರುವ ಹಳೆ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಿ, ಹೊಸ ಬಾಡಿಗೆ ಬರುವ ಹಾಗೆ ಮಾಡಿಕೊಳ್ಳಿ. ವಲಯಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪಾಲಿಕೆ ಆಸ್ತಿಗಳ ಸಮಗ್ರ ಮಾಹಿತಿಯನ್ನು ಕಲೆಹಾಕಿ ಲೀಸ್ ಅವಧಿ ಮುಗಿದಿರುವ ಕಟ್ಟಡಗಳನ್ನು ಪಾಲಿಕೆ ಸುಪರ್ಧಿಗೆ ಪಡೆದುಕೊಳ್ಳುವ ಬಗ್ಗೆ ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕೆಂದು ಶಾಸಕರು ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಅಧೀಕ್ಷಕ ಅಭಿಯಂತರರಾದ ತಿಮ್ಮಪ್ಪ, ಹೆಸ್ಕಾಂ ಅಧೀಕ್ಷಕ ಅಭಿಯಂತರರಾದ ಎಸ್.ಎಸ್. ಜಂಗೀನ್, ಪಾಲಿಕೆ ವಲಯಾಯುಕ್ತರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.