ಅನುತ್ತೀರ್ಣರಿಗೆ ವಿಶೇಷ ತರಗತಿ: ಆದೇಶ ರದ್ದತಿಗೆ ಆಗ್ರಹ

ಬೀದರ್: ಮೇ.18:ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಜೆ ಅವಧಿಯಲ್ಲಿ ವಿಶೇಷ ತರಗತಿ ನಡೆಸುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ನಿಯೋಗದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಕಲಬುರಗಿಯ ಹೆಚ್ಚುವರಿ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಇಲಾಖೆಯ ಅಧಿಕಾರಿ ಶಿವಲಿಂಗಪ್ಪ ಹಿರೇಮನಿ ಅವರಿಗೆ ಸಲ್ಲಿಸಿದರು.
ಏಪ್ರಿಲ್ 10 ರಿಂದ ಮೇ 28 ರ ವರೆಗೆ ರಜೆ ಅವಧಿ ಇದ್ದರೂ ಶಿಕ್ಷಕರು ಮೇ 7 ರ ವರೆಗೆ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಹಾಗೂ ಲೋಕಸಭೆ ಚುನಾವಣೆ ಕೆಲಸ ನಿರ್ವಹಿಸಿದ್ದಾರೆ. ಇದೀಗ ಉಳಿದ ರಜೆ ಅವಧಿಯಲ್ಲೂ ತರಗತಿ ನಡೆಸಲು ಸೂಚಿಸಿರುವುದು ಶಿಕ್ಷಕರಿಗೆ ಆಘಾತ ಉಂಟು ಮಾಡಿದೆ ಎಂದು ಹೇಳಿದರು.
ಇಲಾಖೆ ಕ್ರಮ ಶಿಕ್ಷಕರ ಮೇಲೆ ಒತ್ತಡ ಹೇರುವಂಥದ್ದಾಗಿದೆ. ಇದು, ಕೆಲ ದಿನಗಳಾದರೂ ನೆಮ್ಮದಿಯಿಂದ ರಜೆ ಕಳೆಯ ಬಯಸಿದ್ದ ಶಿಕ್ಷಕರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಕರಿಗೂ ವೈಯಕ್ತಿಕ ಬದುಕು ಇರುತ್ತದೆ. ರಜೆ ದಿನಗಳಲ್ಲಿ ಮಕ್ಕಳ ಮದುವೆ, ಮುಂಜಿವೆ ಕಾರ್ಯಕ್ರಮಗಳಿಗೆ ಯೋಜನೆ ಹಾಕಿಕೊಂಡಿರುತ್ತಾರೆ. ಅನೇಕರು ಸ್ವಂತ ಊರಿಗೆ ಹೋಗುತ್ತಾರೆ. ಕೆಲವರು ಕುಟುಂಬದೊಂದಿಗೆ ಪ್ರವಾಸಕ್ಕೆ ಮುಂಗಡ ಟಿಕೆಟ್ ಬುಕ್ ಮಾಡಿರುತ್ತಾರೆ. ಇಂಥವರಿಗೆ ಇಲಾಖೆ ಆದೇಶ ಸಮಸ್ಯೆ ಉಂಟು ಮಾಡಲಿದೆ. ಆರ್ಥಿಕ ನಷ್ಟಕ್ಕೂ ಕಾರಣವಾಗಲಿದೆ ಎಂದು ಹೇಳಿದರು.
ಕೆಲ ಶಾಲೆಗಳಲ್ಲಿ ಪೂರ್ಣ ಪ್ರಮಾಣದ ಶಿಕ್ಷಕರಿಲ್ಲದ ಕಾರಣ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಗ ಅತಿಥಿ ಶಿಕ್ಷಕರೂ ಲಭ್ಯವಿರುವುದಿಲ್ಲ. ಹೀಗಾಗಿ ಎಲ್ಲ ವಿಷಯಗಳ ಬೋಧನೆ ಸಾಧ್ಯವಾಗುವುದಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ರಜೆ ಅವಧಿಯ ವಿಶೇಷ ತರಗತಿಗೆ ಹಾಜರು ಕೂಡ ಆಗುವುದಿಲ್ಲ ಎಂದು ತಿಳಿಸಿದರು.
ಶಿಕ್ಷಕ ವೃತ್ತಿ ರಜೆ ಸಹಿತ ಸೇವೆಯಾಗಿದೆ. ಶಿಕ್ಷಕರು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಶಾಲಾ ಪೂರ್ವ ಅವಧಿ ಹಾಗೂ ನಂತರದ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿಕೊಂಡು ಬಂದಿದ್ದಾರೆ. ಎ???ಎ 1 ರಿಂದ ಎ???ಎ 4, ಮೂರು ಸರಣಿ ಹಾಗೂ ಒಂದು ಪೂರ್ವ ಸಿದ್ಧತಾ ಪರೀಕ್ಷೆ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಪ್ರತಿ ಮಕ್ಕಳು ಕೂಡ ಉತ್ತೀರ್ಣರಾಗಲಿ ಎನ್ನುವುದೇ ಶಿಕ್ಷಕರ ಉದ್ದೇಶವಾಗಿರುತ್ತದೆ. ಅದಾಗಿಯೂ, ನಿರಂತರ ಶಾಲೆಗೆ ಹಾಜರಾಗದ, ಕಲಿಕೆಯಲ್ಲಿ ತೀರಾ ಹಿಂದುಳಿದ ಕೆಲ ಮಕ್ಕಳು ಅನುತ್ತೀರ್ಣರಾಗುತ್ತಾರೆ. ಇದರಲ್ಲಿ ಶಿಕ್ಷಕರ ದೋಷವೇನೂ ಇರುವುದಿಲ್ಲ ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಕಲಾಲ್ ದೇವಿಪ್ರಸಾದ್, ಉಪಾಧ್ಯಕ್ಷ ಸೂರ್ಯಕಾಂತ ಶಿಂಗೆ,
ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಚಟ್ನಾಳೆ, ಸಹ ಕಾರ್ಯದರ್ಶಿ ಬಲವಂತರಾವ್ ರಾಠೋಡ್, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಡಿ. ಶಹಾಬೊದ್ದಿನ್, ಬಾಬುರಾವ್ ಮಾಳಗೆ, ಅನಿಲಕುಮಾರ ಶೇರಿಕಾರ್, ಸುಭಾಷ್ ಚೌಹಾಣ್, ರಘುನಾಥರಾವ್ ಭೂರೆ ನಿಯೋಗದಲ್ಲಿ ಇದ್ದರು.