ಅನುಕೂಲಕ್ಕೆ ತಕ್ಕಂತೆ ಪಕ್ಷ ಬದಲಿಸುವವರನ್ನು ತಿರಸ್ಕರಿಸಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.25: ತಮ್ಮ ಅನುಕೂಲಕ್ಕೆ ತಕ್ಕಂತೆ ಪಕ್ಷದಿಂದ ಪಕ್ಷಕ್ಕೆ ನಿಷ್ಠೆ ಬದಲಿಸುವ ಮರಿತಿಬ್ಬೇಗೌಡರನ್ನು ಶಿಕ್ಷಕ ಸಮುದಾಯ ತಿರಸ್ಕರಿಸುವಂತೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ.ಟಿ.ಶ್ರೀಂಕಠೇಗೌಡ ಮನವಿ ಮಾಡಿದರು.
ಜೂನ್ 03 ರಂದು ನಡೆಯಲಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿಂದು ಶಾಸಕ ಹೆಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕ ಮತದಾರರ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರ ವಿರುದ್ದ ತೀಕ್ಷ್ಣ ವಾಗ್ದಾಳಿ ನಡೆಸಿದ ಕೆ.ಟಿ.ಎಸ್ ಜೆಡಿಎಸ್ ಪಕ್ಷ ಮರಿತಿಬ್ಬೇಗೌಡರಿಗೆ ಎಲ್ಲವನ್ನೂ ನೀಡಿತ್ತು. ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಯನ್ನೂ ನೀಡಿ ಗೌರವದಿಂದ ನಡೆಸಿಕೊಂಡಿತ್ತು. ಆದರೆ ತಮ್ಮ ರಾಜಕೀಯ ಸ್ವಾರ್ಥಕ್ಕೆ ಮರಿತಿಬ್ಬೇಗೌಡರು ತಮ್ಮನ್ನು ರಾಜಕೀವಾಗಿ ಎತ್ತರಕ್ಕೆ ಬೆಳೆಸಿ ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. 1975 ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸಂಪರ್ಕಕ್ಕೆ ಬಂದವನು ನಾನು. ಜೆಡಿಎಸ್ ಪಕ್ಷದಿಂದ ರಾಜಕೀಯ ಆರಂಭಿಸಿದ ನಾನು ಇದೀಗ ಪಕ್ಷ ನನಗೆ ಟಿಕೆಟ್ ನಿರಾಕರಿಸಿದ್ದರೂ ಪಕ್ಷಕ್ಕೆ ನಿಷ್ಠನಾಗಿಯೇ ಉಳಿದಿದ್ದೇನೆ. ಜೆಡಿಎಸ್ ಪಕ್ಷ ನನ್ನನ್ನು ಸಭಾಪತಿ ಮಾಡಲಿಲ್ಲ. ಇದರಿಂದ ನನಗೆ ಒಳ್ಳೆಯದೇ ಆಯಿತು. ನಾನು ಸಭಾಪತಿಯಾಗಿದ್ದರೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸದನದ ಬಾವಿಗಿಳಿದು ಹೋರಾಟ ಮಾಡಲಾಗುತ್ತಿರಲಿಲ್ಲ. ಜೆಡಿಎಸ್ ಪಕ್ಷ ನನ್ನನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ ಕಾರಣದಿಂದಲೇ ನಾನು ಉತ್ತಮ ಸಂಸದೀಯ ಪಟು ಎನ್ನುವ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು ಎಂದ ಕೆ.ಟಿ.ಶ್ರೀಕಂಠೇಗೌಡ ನನಗೆ ಅಧಿಕಾರವಿರಲಿ ಅಥವಾ ಇಲ್ಲದಿರಲಿ ಶಿಕ್ಷಕರ ಸಮಸ್ಯೆಗಳಿಗೆ ನಿರಂತರ ಧ್ವನಿಯಾಗುತ್ತೇನೆಂದರು.
ಅರೆಕಾಲಿಕ ಉಪನ್ಯಾಸಕರ ಖಾಯಂಮಾತಿ, ಗುತ್ತಿಗೆ ಶಿಕ್ಷಕರ ಖಾಯಂಮಾತಿ, ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿದ್ದು, ರಾಜ್ಯದ ಉದ್ದಗಲಕ್ಕೂ ನೂರಾರು ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜ ನೀಡಿದ್ದು, ಸಾವಿರಾರು ಶಿಕ್ಷಕರ ನೇಮಕಾತಿ ಸೇರಿದಂತೆ ಶಿಕ್ಷಣ ಕ್ಷೇತ್ರದ ಬಹುತೇಕ ಸಮಸ್ಯೆಗಳಿಗೆ ಜೆಡಿಎಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಸ್ಪಂಧಿಸಿ ಕೆಲಸ ಮಾಡಿದೆ. ವಿಧಾನ ಪರಿಷತ್ತಿನಲ್ಲಿ ಮರಿತಿಬ್ಬೇಗೌಡರ ಹೋರಾಟ ಶೂನ್ಯ ಎಂದ ಕೆ.ಟಿ.ಎಸ್ ಇಂದು ನಾನು ಸ್ಪರ್ಧೆಯಲ್ಲಿ ಇಲ್ಲದಿದ್ದರೂ ಕಣದಲ್ಲಿರುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರನ್ನು ಬೆಂಬಲಿಸುತ್ತಿದ್ದೇನೆ. ಶಿಕ್ಷಕರ ಕ್ಷೇತ್ರದ ಯಾವುದೇ ಸಮಸ್ಯೆಗಳಿದ್ದರೂ ಅಬ್ಯರ್ಥಿ ಕೆ.ವಿವೇಕಾನಂದ ಜೊತೆಗೂಡಿ ನಾನು ಹೋರಾಟ ಮಾಡುತ್ತೇನೆ. ದಯಮಾಡಿ ಎಲ್ಲಾ ಶಿಕ್ಷಕ ಮತದಾರರು ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತನೀಡಿ ಸಂಕಷ್ಠದ ಸನ್ನಿವೇಶದಲ್ಲಿರುವ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಗೆಲುವಿನ ಉಡುಗೊರೆ ನೀಡುವಂತೆ ಮನವಿ ಮಾಡಿದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ ನಮ್ಮ ತಾಲ್ಲೂಕಿನ ನೌಕರ ಬಾಂಧವರು ಕಳೆದ ಹಲವಾರು ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಅಪ್ಪಾಜಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಬಿಜೆಪಿ ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯನ್ನಾಗಿ ವಿವೇಕಾನಂದರವರನ್ನು ವರಿಷ್ಟರು ಅಂತಿಮಗೊಳಿಸಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ ಕೆಲಸ ಮಾಡಲು ವಿವೇಕಾನಂದ ರವರು ಬಯಸಿದ್ದು ಒಮ್ಮೆ ಅವಕಾಶ ಕಲ್ಪಿಸಿ ಕೊಟ್ಟರೆ ಅವರ ಕಾರ್ಯ ಚತುರತೆಯನ್ನು ನೀವೆಲ್ಲರೂ ನೋಡಬಹುದಾಗಿದೆ. ಕೆಲಸ ಮಾಡಬೇಕೆಂಬ ತುಡಿತ ಅವರಲ್ಲಿದೆ ಹೀಗಾಗಿಯೇ ಎರಡು ಪಕ್ಷಗಳ ಅಭ್ಯರ್ಥಿಯಾಗಿರುವ ವಿವೇಕಾನಂದರವರ ಜೂನ್ 3ರಂದು ನಡೆಯುವ ಚುನಾವಣೆಯಲ್ಲಿ ಮೊದಲನೇ ಪ್ರಶಸ್ತಿ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕು. ನೌಕರರೊಂದಿಗೆ ನಾನು ಸದಾ ಇರುತ್ತೇನೆ. ಶಿಕ್ಷಕರ ಸಮಸ್ಯೆಗೆ ದನಿಯಾಗಿ ನಾನು ವಿವೇಕಾನಂದರೊಡನೆ ಸಮಾಲೋಚನೆ ಮಾಡಿ ಕೆಲಸ ಮಾಡಲಿದ್ದೇವೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿ ದಂತೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಲು ಸಿದ್ಧವಿದ್ದೇವೆ ಎಂದು ಮನವಿ ಮಾಡಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ವಿವೇಕಾನಂದ ಮಾತನಾಡಿ ವರಿಷ್ಠರ ಸೂಚನೆಯಂತೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಚುನಾವಣೆಯಲ್ಲಿ ನನ್ನ ಹೆಸರಿನ ಮುಂದೆ ಒಂದು ಎಂದು ಬರೆಯುವ ಮೂಲಕ ನನಗೆ ಒಂದು ಅವಕಾಶವನ್ನು ಮಾಡಿಕೊಡಬೇಕು ಶ್ರೀಕಂಠೇಗೌಡ ಹಾಗೂ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ನಾನು ಕೆಲಸ ಮಾಡಲು ಬದ್ಧನಾಗಿರುತ್ತೇನೆ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಮನವಿ ಮಾಡಿದರು.