
ಲಕ್ನೋ, ಡಿ. ೨೩- ಉತ್ತರ ಪ್ರದೇಶದ ಪ್ರಯಾಗ್ ರಾಜ್ಯದ ಪೂಲ್ ಪುರದ ಇಪ್ಪೋ ರಸಗೊಬ್ಬರ ತಯಾರಿಕಾ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ನೌಕರರು ಮೃತಪಟ್ಟು ೧೫ ಮಂದಿ ಅಸ್ವಸ್ಥರಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಭಾರತೀಯ ರೈತ ರಸಗೊಬ್ಬರ ಸಹಕಾರಿ ಲಿಮಿಟೆಡ್ – ಐಎಫ್ಎಫ್ ಸಿಒದಲ್ಲಿ ಅನಿಲ ಸೋರಿಕೆಯಾಗಿ ಈ ದುರ್ಘಟನೆ ಸಂಭವಿಸುತ್ತಿದ್ದಂತೆ, ರಸಗೊಬ್ಬರ ತಯಾರಿಕಾ ಕಾರ್ಖಾನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಯಾಗ್ ರಾಜ್ ನ ಜಿಲ್ಲಾಧಿಕಾರಿ ಭಾನುಚಂದ್ರ ಗೋಸ್ವಾಮಿ ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ೧೫ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ ಎಂದು ತಿಳಿಸಿದ್ದಾರೆ. ಮೃತಪಟ್ಟ ಇಪ್ಕೋದ ನೌಕರರನ್ನು ಸಹಾಯಕ ವ್ಯವಸ್ಥಾಪಕ ಬಿ.ಪಿ. ಸಿಂಗ್ ಮತ್ತು ಉಪವ್ಯವಸ್ಥಾಪಕ ಅಭಿನಂದನ್ ಎಂದು ಗುರುತಿಸಲಾಗಿದೆ.
ಪರಿಹಾರಕ್ಕೆ ಸೂಚನೆ
ರಾಸಾಯನಿಕ ಕಾರ್ಖಾನೆಯಲ್ಲಿ ನಡೆದ ದುರಂತ ಪ್ರಕರಣ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ವ್ಯಕ್ತಪಡಿಸಿದ್ದು, ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ತನಿಖೆಗೆ ಆದೇಶ
ಪೂಲ್ ಪುರದಲ್ಲಿರುವ ರಾಸಾಯನಿಕ ರಸಗೊಬ್ಬರ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದಂತೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದಾರೆ. ವರದಿ ಬಂದ ನಂತರ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.