
ಕಲಬುರಗಿ :ಮಾ.01: ಈಗಾಗಲೇ ದಿವಾಳಿಯಾಗಿರುವ ಜನರ ಮೇಲೆ ಗೃಹ ಬಳಕೆಯ ಅನಿಲ ಸಿಲೆಂಡರ್ ಮೇಲೆ 50ರೂ.ಗಳ ದರ ಹೆಚ್ಚಳದ ಹೇರಿಕೆ ಖಂಡನಾರ್ಹ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ತಿಳಿಸಿದ್ದಾರೆ.
ಇದು ಕಳೆದ 12 ತಿಂಗಳಲ್ಲಿ 6ನೇ ಏರಿಕೆಯಾಗಿದೆ. ಬಜೆಟ್‍ನಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಅಡಿಗೆ ಅನಿಲದ ಸಬ್ಸಿಡಿಯನ್ನು ಶೇಕಡಾ 75ರಷ್ಟು ಕಡಿತ ಮಾಡಿರುವುದರಿಂದ ದರ ಏರಿಕೆಯು ತೀರಾ ಅನಿರೀಕ್ಷಿತವೇನೂ ಅಲ್ಲ. ಆದಾಗ್ಯೂ, ಜಾಗತಿಕವಾಗಿ ಕಚ್ಚಾ ತೈಲದ ದರ ಇಳಿಕೆಯಾಗಿದೆ ಮತ್ತು ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಆಮದು ಮಾಡುವ ಪ್ರಮಾಣವು ಹೆಚ್ಚಾಗಿದೆ ಎಂಬುದನ್ನು ನಾವು ಗಮನಿಸಬೇಕು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬಡವರಿಗೆ ಉಜ್ವಲ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದೆ ಎಂದು ಪ್ರಧಾನಿಯವರು ಕೊಚ್ಚಿಕೊಳ್ಳುತ್ತಾರೆ. ಆದಾಗ್ಯೂ, ಉಜ್ವಲ ಫಲಾನುಭವಿಗಳೂ ಕೂಡ ಸಿಲೆಂಡರ್‍ಗೆ ಇದೇ ಮಾರುಕಟ್ಟೆ ದರವನ್ನು ಕೊಟ್ಟು ಖರೀದಿಸಬೇಕು ಎಂಬುದನ್ನು ಜಾಣ್ಮೆಯಿಂದ ಮರೆಮಾಚುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ವಾಣಿಜ್ಯ ಬಳಕೆಯ ಸಿಲೆಂಡರುಗಳ ಬೆಲೆಯನ್ನು 352ರೂ.ಗಳಷ್ಟು ತೀವ್ರವಾಗಿ ಏರಿಕೆ ಮಾಡಿದ್ದು, ಪರಿಣಾಮವಾಗಿ ಹೊಟೇಲ್‍ಗಳು ಮತ್ತಿತರ ಉದ್ಯಮಗಳ ಮಾಲಿಕರು ಹೊರೆಯನ್ನು ನೇರವಾಗಿ ಸಾಮಾನ್ಯ ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಇದರಿಂದ ಪರೋಕ್ಷ ತೆರಿಗೆಗಳು ಮೂಲಕ ಮತ್ತೆ ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಬಿಸಿ ಎಲ್ಲ ವರ್ಗದ ಜನರಿಗೂ ತಟ್ಟುತ್ತದೆ. ಆದಾಗ್ಯೂ, ಅತೀ ಶ್ರೀಮಂತರು ಕಡಿಮೆ ಆದಾಯ ತೆರಿಗೆಯ ಸುಖವನ್ನು ಅನುಭವಿಸುತ್ತ ತಮ್ಮ ಸಂಪತ್ತನ್ನು ಹಿಗ್ಗಿಸಿಕೊಳ್ಳುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.
ಜನಸಾಮಾನ್ಯರು ಬಳಸುವ ಅಡಿಗೆ ಅನಿಲ ದರ ಏರಿಕೆ ಮಾಡಿರುವ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು, ಇದರ ವಿರುದ್ಧ ಹೋರಾಡಲು ಮುಂದಾಗಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.