
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.17: ಮಾಜಿ ಉಪಮುಖ್ಯಮಂತ್ರಿ ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ ಅವರು ಬಹುಸಂಖ್ಯಾತ ಮಾದಿಗ ಜನಾಂಗದ ನಿವೃತ್ತ ಐ.ಎ.ಎಸ್. ಅಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ಅವರನ್ನು ಹೀಯಾಳಿಸಿ ಮಾತನಾಡಿರುವುದನ್ನು ಖಂಡಿಸಿ ಇಂದು ನಗರದಲ್ಲಿ ಕರ್ನಾಟಕ ರಾಜ್ಯ ಡಾ|| ಬಾಬು ಜಗಜೀವನ್ ರಾಮ್, ಜನಜಾಗೃತಿ ವೇದಿಕೆ ಬೃಹತ್ ಪ್ರತಿಭಟನೆ ನಡೆಸಿತು.
ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಪಂಪಾಪತಿ ನೇತೃತ್ವದಲ್ಲಿ ನಗರದ ನಾರಾಯಣರಾವ್ ಪಾರ್ಕ್ ನಿಂದ ಪರಮೇಶ್ವರ್ ಅವರ ಪ್ರತಿಕೃತಿಯನ್ನು ಮೆರವಣಿಗೆ ಮಾಡಿ ಗಡಗಿ ಚೆನ್ನಪ್ಪ ವೃತ್ತದಲ್ಲಿ ಘೋಷಣೆಗಳನ್ನು ಕೂಗುತ್ತ ದಹನ ಮಾಡಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ, ಎಲ್ಲಾದರು ಚುನಾವಣೆಗೆ ಸ್ಪರ್ಧಿಸ ಬಹುದು, ಆದರೆ ತಾವು ಕೊರಟಗೆರಿಯ ವಿಧಾನಸಭಾ ಕ್ಷೇತ್ರದ ಒಕ್ಕಲಿಗರ ಸಮಾವೇಶದಲ್ಲಿ. ಬಹುಸಂಖ್ಯಾತ ಮಾದಿಗ ಜನಾಂಗದ ನಿವೃತ್ತ ಐ.ಎ.ಎಸ್. ಅಧಿಕಾರಿ ಬಿ.ಹೆಚ್. ಅನಿಲ್ ಕುಮಾರ್ ಅವರು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಯಾಗಿರುವುದನ್ನು ನೋಡಿ ಸಹಿಸಲಾರದೇ. ಅವರನ್ನು ಹೀಯಾಳಿಸಿ ಮೀಸೇನು ಇಲ್ಲ, ಗೀಸೆನು ಇಲ್ಲ. ಯಾವ ಮೀಸೆಗೆ ಹೆದರಲ್ಲ. ಯಾರೋ ಬರ್ತಿರೋ ಬರೀ ನನ್ನ ಮಕ್ಕಳೇ ಎಂದು ಏಕವಚನದಲ್ಲಿ ಮಾತ ನಾಡಿರುವುದು ನಿಮ್ಮ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಮಾದಿಗ ಸಮುದಾಯದವರನ್ನು ರಾಜಕೀಯವಾಗಿ ಬೆಳೆಯಲು ಬಿಡದ ನೀವು. ನಿಮ್ಮ ಪಕ್ಷ ಅವರನ್ನು ಬಳಸಿಕೊಂಡು ಅವರು ಬೆಳೆಯುವುದನ್ನು ಸಹಿಸದೇ ಇರುವ ನಿಮಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆಂದು ಎಚ್ಚರಿಸಿದರು.
ಹಲವು ವರ್ಷಗಳಿಂದ ಹೊಲೆ ಮಾದಿಗರ ಹೆಸರು ಹೇಳಿಕೊಂಡು ರಾಜಕೀಯವಾಗಿ ಉನ್ನತ ಹುದ್ದೆಗಳನ್ನು ಪಡೆದುಕೊಂಡು ಐಷಾರಾಮಿ ಜೀವನ ಅನುಭವಿಸಿದ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ, ಡಾ|| ಜಿ. ಪರಮೇಶ್ವರ, ಹೆಚ್.ಸಿ. ಮಹಾದೇವಪ್ಪ, ಶ್ರೀನಿವಾಸ ಪ್ರಸಾದ್, ಮೋಟಮ್ಮ, ನರೇಂದ್ರ ಸ್ವಾಮಿ ಮೊದಲಾದವರು. ಹೊಲೆ ಮಾದಿಗರ ಒಳಮೀಸಲಾತಿಗೆ ನ್ಯಾಯ ಕೊಡಿಸದೇ ಸದಾಶಿವ ಆಯೋಗದ ವರದಿ ಬಗ್ಗೆ ಸದನದಲ್ಲಿ ಚರ್ಚೆ ಮಾಡದೇ ವಿರೋಧ ಮಾಡಿ. ಕಳೆದ 25 ವರ್ಷಗಳಿಂದ ನ್ಯಾಯ ಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಅಡ್ಡಿಪಡಿಸಿ. ನಮ್ಮ ಹೊಲೆ ಮಾದಿಗರಿಗೆ ಅನ್ಯಾಯ ಮಾಡಿ ಮೋಸ ಮಾಡಿರುತ್ತಾರೆ.
ಹೊಲೆ ಮಾದಿಗರ ಸಮುದಾಯ ಗಳನ್ನು ಬಳಸಿಕೊಂಡು 35 ವರ್ಷಗಳ ಕಾಲ ರಾಜಕೀಯ ಅಧಿಕಾರ ಪಡೆದು ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಲ್ಲಿ ತಾವುಗಳೇ ಅವೈಜ್ಞಾನಿಕ ವರದಿ ಎಂದು ವಿರೋಧ ವ್ಯಕ್ತಪಡಿಸಿದ್ದೀರಿ ಮತ್ತು ದಲಿತ ಸಂಘಟನೆಗಳನ್ನು ವಿಭಾಗ ಮಾಡಿ ಒಳ ಮೀಸಲಾತಿ ಹೋರಾಟಕ್ಕೆ ಭಾಗವಹಿಸದಂತೆ ಧ್ವನಿ ಎತ್ತದಂತೆ ಮಾಡಿದ್ದು ನೀವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್. ಕೆಂಚಪ್ಪ, ಪದಾಧಿಕಾರಿಗಳಾದ ಹೆಚ್, ಭೀಮಲಿಂಗಪ್ಪ, ಹೆಚ್.ಎಸ್. ಗಾದಿಅಂಗಪ್ಪ, ಜೆ. ಮಲ್ಲಕಾರ್ಜುನ, ವೈ ಅರಣಾಚಲಂ, ಅನಿಲ್‌ಕುಮಾರ್, ವೀರೇಶ್, ಎ.ಕೆ. ಮಲ್ಲಿಕಾರ್ಜುನ, ಬಾಪೂಜಿ ನಗರ ಕೃಷ್ಣ, ಭೀಮಾದಾಸು, ಮುಕ್ಕಣ, ಎಸ್. ಪ್ರಸಾದ್, ಕೆ. ಬಾಬು, ಹೆಚ್. ಗೋವಿಂದರಾಜು ರಾಮಚಂದ್ರ ಗಾದಿಲಿಂಗ, ಹೆಚ್. ಸುರೇಶ್, ಚಂದ್ರಶೇಖರ್ ಕುಮಾರ್, ರಾಮಾಂಜಿನಿ, ಇನ್ನಿತೃರು ಭಾಗವಹಿಸಿದ್ದರು.