ಅನಾವಶ್ಯಕವಾಗಿ ಓಡಾಡುವವರ ಮೇಲೆ ನಿಗಾವಹಿಸಲು ಸೂಚನೆ

ಕೆ.ಆರ್.ಪೇಟೆ:ಏ:25: ದಿನೇದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರ ವೀಕೆಂಡ್ ಕಪ್ರ್ಯೂ ಜಾರಿಗೊಳಿಸಿದ್ದು ಇದರ ಬಗ್ಗೆ ಕಳೆದ 2-3 ದಿನಗಳಿಂದ ಸಾಕಷ್ಟು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಇಷ್ಟಾದರೂ ಅನಾವಶ್ಯಕವಾಗಿ ತಿರುಗಾಟ ನಡೆಸುವವರ ಮೇಲೆ ನಿಗಾವಹಿಸಿ ಕಫ್ರ್ಯೂ ಯಶಸ್ವಿಯಾಗಲು ಶ್ರಮವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಎಂ.ಅಶ್ವಿನಿ ತಿಳಿಸಿದರು.
ಪಟ್ಟಣದ ಟಿಬಿ ಸರ್ಕಲ್ ಬಳಿ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದವರನ್ನು, ಹಾಗೂ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರನ್ನು ತಪಾಸಣೆ ಮಾಡುವ ವೇಳೆ ಅನಿರೀಕ್ಷಿತ ಭೇಟಿ ನೀಡಿ ವೀಕೆಂಡ್ ಕಫ್ರ್ಯೂ ಹಾಗೂ ಕಾನೂನು ಸುವ್ಯವಸ್ಥೆಯನ್ನು ಜಾರಿಗೋಳಿಸಿರುವ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಮಾತನಾಡಿದರು.
ಕೊರೋನಾ ತೀವ್ರತೆ ನಿರೀಕ್ಷೆಗಿಂತ ವೇಗವಾಗಿ ಹರಡುತ್ತಿದ್ದು ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದು, ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಇಂಥಹ ಪ್ರಕರಣಗಳು ಕಂಡುಬಂದರೆ ಕೂಡಲೇ ಅವರುಗಳ ಮೇಲೆ ಕ್ರಮ ಕೈಗೊಳ್ಳಬೇಕು.
ಅಂಗಡಿ ಗಳಲ್ಲಿ ಸಾಮಗ್ರಿಗಳನ್ನು ಕೊಳ್ಳುವ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಖರೀದಿ ಮಾಡಬೇಕು. ಮದುವೆ ಹಾಗೂ ಶವ ಸಂಸ್ಕಾರ ಮುಂತಾದ ಕಾರ್ಯಗಳಲ್ಲಿ ಸರ್ಕಾರ ನಿಗಧಿಗೊಳಿಸಿರುವ ಜನರ ಪ್ರಮಾಣವನ್ನು ಮೀರ ಬಾರದು ಎಂದು ತಿಳಿಸಿದರು.
ಭೇಟಿ ವೇಳೆ ವೃತ್ತ ನಿರೀಕ್ಷಕ ಎಂ.ಕೆ.ದೀಪಕ್, ಪಿಎಸ್‍ಐಗಳಾದ ಬ್ಯಾಟರಾಯಗೌಡ, ಸುರೇಶ್, ಪ್ರಮೋದ್, ಪ್ರೊಬೆಷನರಿ ಪಿಎಸ್‍ಐ ಕುಮುದ, ವಿರೂಪಾಕ್ಷ, ರವಿ, ಸೇರಿದಂತೆ ಹಲವರು ಹಾಜರಿದ್ದರು.