ಅನಾರೋಗ್ಯದಿಂದ ಅನಾಥ ವೃದ್ದೆಸಾವು.
ವೃದ್ದಾಶ್ರಮ, ಪ ಪಂ, ಪೊಲೀಸ್ ಸಿಬ್ಬಂದಿಯಿಂದ ಅನಾಥೆ ಅಂತ್ಯಸಂಸ್ಕಾರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ. 16 :- ದಿಕ್ಕಿಲ್ಲದವರಿಗೆ ದೇವರೇ ದಿಕ್ಕು ಅನ್ನೋಹಾಗೆ ಅನಾಥೆಯಾಗಿ ಊರಲ್ಲಿ ಸುತ್ತಾಡುತ್ತಿದ್ದ ಮಹಿಳೆಗೆ ವೃದ್ದಾಶ್ರಮ ಆಸರೆಯಾಗಿತ್ತು ಆದರೆ ಅನಾರೋಗ್ಯ ಪೀಡಿತ ಅನಾಥ ಮಹಿಳೆ ಸೋಮವಾರ  ಸಂಜೆ ಮೃತಪಟ್ಟಿದ್ದು ದಿಕ್ಕಿಲ್ಲದ ಮಹಿಳೆಯ ಅಂತ್ಯಸಂಸ್ಕಾರವನ್ನು ವೃದ್ದಾಶ್ರಮ ಸಿಬ್ಬಂದಿಗಳು ಸೇರಿದಂತೆ ಕೂಡ್ಲಿಗಿ ಪಟ್ಟಣಪಂಚಾಯತಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆಂದು ಹೇಳಬಹುದಾಗಿದೆ.
ಕಳೆದ ಹತ್ತುದಿನದ ಹಿಂದಷ್ಟೇ ಅಂದರೆ ನವೆಂಬರ್ 5 ರಂದು ಅನಾಥ ಮಹಿಳೆಯನ್ನು ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯ ಪುನಶ್ಚೇತನ ವೃದ್ಧಾಶ್ರಮಕ್ಕೆ ತಂದು ಬಿಡಲಾಗಿ,  ಮಹಿಳೆ ಹೆಸರು ಕೇಳಲಾಗಿ ಮಂಜಮ್ಮ ಅಂತ ಹೇಳುತ್ತಿದ್ದು ಸುಮಾರು 55- 60 ವರ್ಷದ ಮಹಿಳೆಯಾಗಿದ್ದ ಇವಳು ಅನಾರೋಗ್ಯ ಪೀಡಿತಳಾಗಿದ್ದಳು ಯಾವ ಊರು ಎಂದು ಕೇಳಿದರೆ ಆನೇಕಲ್ ಅಂತ ಹೇಳಿದ್ದಾಳೆ ಆದರೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಬರುವ ಆನೇಕಲ್ ನಲ್ಲಿ ಪೊಲೀಸರು ವಿಚಾರ ಮಾಡಲಾಗಿ ಈ ಮಹಿಳೆ  ಆ ಗ್ರಾಮದವಳಲ್ಲ ಎಂದು ಹೇಳಲಾಗುತ್ತಿದ್ದು ಬಹುಶಃ ಬೇರೆ ಆನೇಕಲ್ ಇರಬಹುದು ಎಂದು ಹೇಳಲಾಗುತ್ತಿದೆ. ಈ ಮಹಿಳೆಗೆ ಮಕ್ಕಳು ಸಂಬಂಧಿಗಳು ಯಾರು ಇಲ್ಲವೆಂದು ಜೀವಂತವಿದ್ದಾಗ ಹೇಳಿದ್ದಳು. ತೀವ್ರ ಅನಾರೋಗ್ಯ ಪೀಡಿತಳಾದ ಅನಾಥ ಮಹಿಳೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿಕೊಂಡು ಆಕೆಯ ತಲೆ ತುಂಬಾ ಗಾಯವಾಗಿದ್ದುದರಿಂದ ತಲೆಯ ಕೂದಲು ಕತ್ತರಿಸಿ ಹಾಗೂ ಚಿಕಿತ್ಸೆ ನೀಡಿ ಉಪಚರಿಸಲಾಗಿತ್ತಾದರೂ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಗೆ ಮಲಮೂತ್ರ ಹೋಗದೆ ಸೇವಿಸಿದ ಆಹಾರ ಅಜೀರ್ಣವಾಗದೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ 4-30 ಗಂಟೆ ಸುಮಾರು ವೃದ್ಧಾಶ್ರಮದಲ್ಲಿ ಮೃತಪಟ್ಟಿದ್ದಾಳೆ.
ಈಕೆಯ ಸಂಬಂದಿಕರು ಯಾರು ಎಂಬುದು ತಿಳಿಯದೆ ಅನಾಥ ಮಹಿಳೆಯ ಅಂತ್ಯಸಂಸ್ಕಾರವನ್ನು ಮಾಡಲು ವೃದ್ದಾಶ್ರಮದವರು  ಪೊಲೀಸರಿಗೆ ಮಾಹಿತಿ ತಿಳಿಸಿದಂತೆ ಕೂಡ್ಲಿಗಿ ಪಟ್ಟಣಪಂಚಾಯತಿ ಮುಖ್ಯಾಧಿಕಾರಿಗಳು ತಮ್ಮ ಇಲಾಖೆಯ ಮುಕ್ತಿಧಾಮ ಕಳುಹಿಸಿದ್ದು ವೃದ್ದಾಶ್ರಮದ ರಾಜು, ಪ್ರಸಾದ, ಮಂಜುನಾಥ, ಸುದೀಪ ಸೇರಿದಂತೆ ಪೊಲೀಸ್ ಇಲಾಖೆಯ ಎಎಸ್ ಐ  ಹೊನ್ನೂರಪ್ಪ ಮತ್ತು ಇತರರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಇಮ್ರಾನ್ ಹಾಗೂ ಇತರರು ಸೇರಿ ಅನಾಥ ಮಹಿಳೆ ಮಂಜಮ್ಮನ ಮೃತದೇಹವನ್ನು ಕೂಡ್ಲಿಗಿ ಶಾಂತಿಧಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆಸಿದ್ದಾರೆ.
ಈ ಪತ್ರಿಕೆಯಲ್ಲಿರುವ ಮಹಿಳೆ ಭಾವಚಿತ್ರ ಗುರುತಿಸಿ ಯಾರಾದರೂ ಈ ಮಹಿಳೆಯ ಸಂಬಂಧಿಕರಿದ್ದರೆ ಕೂಡ್ಲಿಗಿ ಪಟ್ಟಣದಲ್ಲಿರುವ ಪುನಶ್ಚೇತನಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಪೊಲೀಸರು ಪತ್ರಿಕೆ ಮೂಲಕ ತಿಳಿಸಿದ್ದಾರೆ