ಅನಾದ್ಯಂತದಲ್ಲಿ ಸಾಂಸ್ಕೃತಿಕ ವೈಭವ ಕಾನೂನು ಅರಿವು ಅಗತ್ಯ: ಬಿ.ದಯಾನಂದ್

ಬೆಂಗಳೂರು.ಮೇ೪: ಯುವಜನತೆಗೆ ನಮ್ಮ ನೆಲದ ಕಾನೂನುಗಳ ಬಗ್ಗೆ ಅರಿತು ಸಮಾಜದ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಅಗತ್ಯವಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದರು.
ನಗರದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಉತ್ಸವ ’ಅನಾದ್ಯಂತ-೨೦೨೪’ ಅನ್ನು ಉದ್ಘಾಟಿಸಿ ನಂತರ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಕಾನೂನಿನ ಅರಿವು ಬಹಳ ಮುಖ್ಯ. ಕಾನೂನುಗಳ ಬಗ್ಗೆ ಪರಿಜ್ಞಾನವಿಲ್ಲದೆ ನಮ್ಮ ಬಹುತೇಕ ಯುವಜನರು ತಮಗೇ ತಿಳಿಯದಂತೆ ಅಪರಾಧಗಳ ಕೃತ್ಯಗಳಲ್ಲಿ ಭಾಗಿಯಾಗುತ್ತಿ
ದ್ದಾರೆ. ಕಾನೂನಿನ ಅರಿವು ಅಕ್ರಮ ಹಾಗೂ ಕಾನೂನುಬಾಹಿರ ಕೃತ್ಯಗಳಿಗೆ ಬಲಿಪಶುಗಳಾಗುವುದನ್ನೂ ತಪ್ಪಿಸುತ್ತದೆ ಎಂದರು.ಅನಾದ್ಯಂತದಲ್ಲಿ ರಾಷ್ಟ್ರದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳನ್ನು ಪ್ರತಿನಿಧಿಸಿದ್ದ ಸಹಸ್ರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ‘ನಮ್ಮ ನಗರಗಳು ಸಕಲರ ಕನಸುಗಳನ್ನು ನನಸು ಮಾಡುವುದು ಎಂಬ ಘೋಷವಾಕ್ಯದೊಂದಿಗೆ ’ಅನಾದ್ಯಂತ-೨೦೨೪”, ತಂತ್ರಜ್ಞಾನದ ಸದ್ಬಳಕೆಗೆ ಹಾಗೂ ನಗರಗಳ ವ್ಯವಸ್ಥಿತ ಅಭಿವೃದ್ಧಿಗೆ ಅನೇಕ ಅನ್ವೇಷಣಾಧಾರಿತ ಸಂವಾದಗಳಿಗೆ ವೇದಿಕೆಯಾಯಿತು.
ಚಲನ ಚಿತ್ರನಟಿ ಸಪ್ತಮಿ ಗೌಡ ಮಾತನಾಡಿ ಪಾಠ ಹೇಳಿ, ಜ್ಞಾನದ ಬಗ್ಗೆ ಅರಿವು ಮೂಡಿಸುವ ಅಧ್ಯಾಪಕರುಗಳು ನಿಜಕ್ಕೂ ದೇವರ ಸಮಾನ, ಅವರನ್ನು ಗೌರವಿಸಬೇಕು ಎಂದು ಹೇಳಿದರು.
ಉತ್ಸವದಲ್ಲಿ ’ಐಡಿಯಾಥಾನ್ ೫.೦’, ’ಕೋಡ್ ಸ್ಟ್ರಿಂಟ್ ೨.೦’, ’ಸಿಮ್ ರೇಸಿಂಗ್, ’ಬಗ್ ಬ್ಯಾಶ್ ಬೊನಾಂಜ’, ’ಕ್ವಿಜ್, ’ಟ್ರೆಶರ್ ಹಂಟ್, ’ಬೈಟ್ ಬ್ಯಾಟಲ್, ’ಕೋಡ್ ವಾರ್ಸ್’, ನೃತ್ಯ, ಚರ್ಚಾ ಸ್ಪರ್ಧೆ, ಕ್ರೀಡೆ, ಫ್ಯಾಶನ್ ಶೋ ಮೊದಲಾದ ಚಟುವಟಿಕೆಗಳು ನಡೆದವು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಪ್ರೊ. ಸಂದೀಪ್ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್, ಶಿಕ್ಷಕ ಸಂಯೋಜಕರಾದ ಡಾ. ಎನ್. ನಳಿನಿ ಹಾಗೂ ಡಾ. ಸುಧೀರ್ ರೆಡ್ಡಿ ಉಪಸ್ಥಿತರಿದ್ದರು.