ಅನಾಥ ಹಾಗೂ ನೊಂದ ಜೀವಗಳ ಆಪತ್ಭಾಂದವ ನಿಜಪ್ಪ ಮತ್ತು ಸಂಗೀತಾ ಹಿರೇಮನಿ ದಂಪತಿ

ಅಥಣಿ :ಏ.6: ಮಹಾರಾಷ್ಟ್ರ ಮೂಲದ ಮಾಧವಿ ಅನ್ನುವ ಮಹಿಳೆ ಒಬ್ಬರು ಮರಾಠಿ ಹೊರತು ಪಡಿಸಿ ಬೇರೆ ಭಾಷೆ ಅರಿಯದೆ ಹಲವಾರು ದಿನಗಳಿಂದ ಅಥಣಿಯಲ್ಲಿ ಅಲೆದಾಡುತ್ತಿದ್ದು ಕೌಟುಂಬಿಕ ಕಲಹದಿಂದ ಮನನೊಂದು ಮನೆ ಬಿಟ್ಟು ಮಾನಸಿಕವಾಗಿ ಊರೂರು ಅಲೆಯುತ್ತ ಅಥಣಿ ಪಟ್ಟಣಕ್ಕೆ ಆಗಮಿಸಿದ್ದರು.
ಹೌದು, ಮನನೊಂದು ಅಸ್ವಸ್ಥಗೊಂಡು ಮಹಾರಾಷ್ಟ್ರದ ಮುಂಬೈಯಿಂದ ಅಥಣಿಗೆ ಆಗಮಿಸಿದ್ದ ಮಾಧವಿ ಎನ್ನುವ ಮಹಿಳೆ ಒಬ್ಬಳನ್ನು ತಮ್ಮ ಅನಾಥಾಶ್ರಮಕ್ಕೆ ಕರೆದುಕೊಂಡು ಬಂದು ಸಂಗೀತಾ ಹಿರೇಮನಿ ಅವರು ಅವಳಿಗೆ ಸ್ನಾನ ಮಾಡಿಸಿ ಶುಚಿಗೊಳಿಸಿ ಬೇರೆ ಬಟ್ಟೆ ತೊಡಿಸಿ ಅವರ ಸ್ವಂತ ಊರಿಗೆ ಕಳಿಸಿದ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಕಳೆದ ಹಲವಾರು ದಿನಗಳಿಂದ ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಇರುವ ಬಸ್ ತಂಗುದಾಣದಲ್ಲಿ ಮಲಗುತ್ತಿರುವದನ್ನು ಕಂಡ ನಿಜಪ್ಪ ಹಿರೇಮನಿ ದಂಪತಿಗಳು ಅವಳಿಗೆ ರಾತ್ರಿ ಊಟ ನೀಡುತ್ತಿದ್ದರು ಆ ಮಹಿಳೆಯ ಪೂರ್ವಾಪರ ವಿಚಾರಿಸಿ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಗೆ ಕರೆತಂದ ದಂಪತಿ ಕೆಲದಿನಗಳ ಕಾಲ ಅಲ್ಲಿಯೇ ಉಪಚರಿಸಿ ಮಹಿಳೆಗೆ ಸಾಂತ್ವನ ಹೇಳುವ ಮೂಲಕ ಅವಳ ಸ್ವಂತ ಮನೆಗೆ ಹೋಗುವ ವ್ಯವಸ್ಥೆಯನ್ನು ಮಾಡಿದ್ದಾರೆ.
ಈ ಬಗ್ಗೆ ನಿಜಪ್ಪ ಹಿರೇಮನಿ ಮಾತನಾಡಿ ಹೀಗೆ ಹಲವಾರು ಜನ ಮಾನಸಿಕ ಅಸ್ವಸ್ಥರು ಮತ್ತು ಕೌಟುಂಬಿಕ ಕಲಹದಿಂದ ಮನೆ ಬಿಟ್ಟು ಬಂದರವನ್ನು ಮರಳಿ ಗೂಡಿಗೆ ಅನ್ನುವಂತೆ ಅವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಆದರೆ ಹಲವಾರು ಬಾರಿ ಯಾರೂ ದಿಕ್ಕಿಲ್ಲದ ಜನರು ಬಂದಾಗ ಅವರನ್ನು ಉಳಿಸಿಕೊಳ್ಳಲು ಬಾಡಿಗೆ ಕಟ್ಟಡಗಳಲ್ಲಿ ಸ್ಥಳಾವಕಾಶದ ಕೊರತೆ ಎದುರಿಸುವಂತಾಗಿದ್ದು ಸರ್ಕಾರ ಅಥವಾ ಸಂಘ ಸಂಸ್ಥೆಗಳು ಸ್ವಂತದ ಕಟ್ಟಡಕ್ಕೆ ಅನುಕೂಲ ಕಲ್ಪಸಿದರೆ ಮತ್ತಷ್ಟು ಜನರ ಸೇವೆ ಮಾಡಲು ಸಹಕಾರಿ ಆಗಲಿದೆ ಎಂದಿದ್ದಾರೆ.
ಈಗಾಗಲೇ ಮಹಾರಾಷ್ಟ್ರದ ಮೀರಜ್,
ಕವಟೆಮಹಾಂಕಾಳ, ಜತ್ತ, ಸೇರಿದಂತೆ ಹಲವು ಬೇರೆ ಬೇರೆ ಪ್ರದೇಶಗಳಿಂದ ಬಂದು ಅಥಣಿ ಯಲ್ಲಿ ಹುಚ್ಚರಂತೆ ಅಲೆಯುತ್ತಿರುವ ನೂರಾರು ಜನರಿಗೆ ನೀಜಪ್ಪ ಹಿರೇಮನಿ ಮತ್ತು ಸಂಗೀತಾ ಹಿರೇಮನಿ ದಂಪತಿಗಳು ಮಾನವೀಯ ನೆಲೆಗಟ್ಟಿನಲ್ಲಿ ಸಹಾಯ ಹಸ್ತ ಚಾಚುತ್ತಿದ್ದು ಅವರು ನಡೆಸುತ್ತಿರುವ ಸಾಮಾಜಿಕ ಸೇವೆಗೆ ಮತ್ತಷ್ಟು ಬಲ ತುಂಬಲು ಜನಪ್ರತಿನಿಧಿಗಳು, ಸ್ಥಳೀಯ ಆಡಳಿತಗಳು ಮುಕ್ತ ಮನಸ್ಸಿನಿಂದ ಸ್ಥಳಾವಕಾಶ ಕಲ್ಪಿಸಿ ಸ್ವಂತದ ಕಟ್ಟಡಕ್ಕೆ ಸಹಾಯ ಮಾಡಿದರೆ ಮತ್ತಷ್ಟು ಸೇವೆ ಅವರಿಂದ ಸಮಾಜಕ್ಕೆ ಸಿಗಲಿದೆ ಅನ್ನುವದು ಪ್ರಜ್ಞಾವಂತರ ಅಭಿಪ್ರಾಯ ವಾಗಿದೆ.