ಅನಾಥ ವಿದ್ಯಾರ್ಥಿನಿಯರ ಬಿಬಿಎ ಪದವಿ ಶಿಕ್ಷಣಕ್ಕೆ ರೋಟರಿ ಕ್ಲಬ್ ನೆರವು: ಡಾ. ಸುಧಾ ಹಾಲಕಾಯಿ

ಕಲಬುರಗಿ: ಡಿ.25: ಅನೇಕ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರೋಟರಿ ಕ್ಲಬ್ ಈ ಬಾರಿ ಇಬ್ಬರು ಅನಾಥ ವಿದ್ಯಾರ್ಥಿನಿಯರಿಗೆ ಬಿಬಿಎ ಪದವಿ ವ್ಯಾಸಂಗದ ಸಂಪೂರ್ಣ ವೆಚ್ಚವನ್ನು ಭರಿಸಲಿದೆ ಎಂದು ಕಲಬುರ್ಗಿ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ಸುಧಾ ಹಾಲಕಾಯಿ ಅವರು ಹೇಳಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ರೋಟರಿ ಶಾಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾಥಾಶ್ರಮದಲ್ಲಿ ಎರಡು ತಿಂಗಳು ಇರುವಾಗಲೇ ಬಿಟ್ಟು ಹೋಗಿದ್ದ ಗಾಯತ್ರಿ ಹಾಗೂ ಸಹನಾ ಅವರಿಬ್ಬರು ಬಿಬಿಎ ಪದವಿಯನ್ನು ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಮಹಾ ವಿದ್ಯಾಲಯದಲ್ಲಿ ಪಡೆಯುತ್ತಿದ್ದು, ಅವರಿಬ್ಬರ ಶಿಕ್ಷಣದ ವೆಚ್ಚವನ್ನು ಭರಿಸಲಾಗುವುದು ಎಂದರು.
ಅದೇ ರೀತಿ ಜ್ಞಾನ ದೀವಿಗೆ ಯೋಜನೆಯಡಿ ನೆರೆಯ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹತ್ತಿಕುಣಿಯಲ್ಲಿ 10ನೇ ತರಗತಿಯ ಸರ್ಕಾರಿ ಗ್ರಾಮೀಣ ಶಾಲೆಯ 90 ವಿದ್ಯಾರ್ಥಿಗಳಿಗೆ ಪ್ರಥಮವಾಗಿ ಟ್ಯಾಬ್‍ಗಳನ್ನು ಸಹ ವಿತರಿಸಲಾಗಿದೆ ಎಂದು ಅವರು ಹೇಳಿದರು.
ಕ್ರಿಸ್‍ಮಸ್ ಹಬ್ಬವನ್ನು ನಗರದ ಆಳಂದ್ ಕಾಲೋನಿಯಲ್ಲಿನ ಕುಷ್ಠರೋಗಿಗಳ ಬಡಾವಣೆಯಲ್ಲಿ ಸುಮಾರು 80 ಕುಟುಂಬಗಳಿಗೆ ಎರಡು ಬಗೆಯ ಅವಶ್ಯಕ ಕಿಟ್‍ಗಳನ್ನು ವಿತರಿಸುವ ಮೂಲಕ ಆಚರಿಸಲಾಗುವುದು. ಅದೇ ರೀತಿ ನಗರದಲ್ಲಿನ ಜಯದೇವ್ ಹೃದ್ರೋಗ ಆಸ್ಪತ್ರೆಗೆ 3.6 ಲಕ್ಷ ರೂ.ಗಳ ಮೌಲ್ಯದ 2ಡಿ ಇಕೋ ಪರೀಕ್ಷೆ ಕೈಗೊಳ್ಳುವ ಬೃಹತ್ ತಂತ್ರಜ್ಞಾನದ ಯಂತ್ರವನ್ನು ಕೊಡಮಾಡುವ ಯೋಜನೆ ಇದೆ ಎಂದರು.
ಪಾವಗಡದ ರಾಮಕೃಷ್ಣ ಆಶ್ರಮದ ಮುಖ್ಯಸ್ಥ ಸ್ವಾಮಿ ಜಪಾನಂದ್ ಹಾಗೂ ಇನ್‍ಫೋಸಿಸ್‍ನ ಶ್ರೀಮತಿ ಸುಧಾಮೂರ್ತಿ ಅವರ ಸಹಯೋಗದಲ್ಲಿ ಜಿಲ್ಲೆಯಲ್ಲಿನ ಪ್ರವಾಹ ಪೀಡಿತರಿಗೆ ಆಹಾರದ ಕಿಟ್‍ಗಳನ್ನು 4000ರೂ.ಗಳ ಮೌಲ್ಯಕ್ಕಿಂತ ಕಡಿಮೆ ಇಲ್ಲದ್ದ ದಿನನಿತ್ಯ ಪದಾರ್ಥಗಳನ್ನು ಒದಗಿಸಲಾಗಿದೆ. ಜಿಲ್ಲೆಯ ಅಫಜಲಪೂರ, ಜೇವರ್ಗಿ ತಾಲ್ಲೂಕುಗಳು ಅಲ್ಲದೇ ನೆರೆಯ ಮಹಾರಾಷ್ಟ್ರದ ಗಡಿಯಲ್ಲಿರುವ ಅಕ್ಕಲಕೋಟೆ ತಾಲ್ಲುಕುಗಳಿಗೂ ಆಹಾರದ ಕಿಟ್‍ಗಳನ್ನು ಕೊಡಮಾಡಲಾಗಿದೆ. ಸುಮಾರು 2800 ಕುಟುಂಬಗಳು, 15 ಗ್ರಾಮಗಳು ಲಾಭ ಪಡೆದುಕೊಂಡಿವೆ. ಅಕ್ಟೋಬರ್ ಹಾಗೂ ನವೆಂಬರ್‍ನಲ್ಲಿ ಸುಮಾರು 1,350,000ರೂ.ಗಳ ಮೌಲ್ಯದ ಆಹಾರದ ಕಿಟ್‍ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ ತಂಪು ಕುಡಿಯುವ ನೀರಿನ ಘಟಕಗಳನ್ನು ನಾಗನಹಳ್ಳಿ ಪೋಲಿಸ್ ತರಬೇತಿ ಕೇಂದ್ರ, ಬ್ರಹ್ಮಪೂರ ಪೋಲಿಸ್ ಠಾಣೆ ಹಾಗೂ ನಗರ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಕೊಡುಗೆಯಾಗಿ ಕೊಡಲಾಗಿದೆ. ಅದೇ ರೀತಿ ಸ್ವಾತಂತ್ರ್ಯ ದಿನೋತ್ಸವ ಸಂದರ್ಭದಲ್ಲಿ ನಗರದ ರಾಮ್ ಕನ್ನಡ ಕಾನ್ವೆಂಟ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಮಾಸ್ಕ್, ಸೈನಿಟೈಜರ್, ಸಿಹಿ ವಿತರಿಸಲಾಗಿದೆ. ನಗರದ ವೃದ್ಧಾಶ್ರಮಕ್ಕೆ ತೆರಳಿ ಅವರಿಗೆ 6 ತಿಂಗಳಿಗೆ ಆಗುವಷ್ಟು ಪಡಿತರ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ಅಂತರ್ ಜಾಲದಲ್ಲಿ ಹಲ್ಲುಗಳ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಪ್ಪಾ ಪಬ್ಲಿಕ್ ಶಾಲೆ ಸೇರಿದಂತೆ ಸುಮಾರು 3000 ಜನರು ಅದರ ಲಾಭ ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಪರಿಸರ ರಕ್ಷಣೆಗೂ ಸಹ ಕ್ಲಬ್ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಎಸ್. ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ 3000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗವರ್ನರ್ ಮುರುಳೀಧರ್, ಕಾರ್ಯದರ್ಶಿ ಶಿವಚಂದ್ರ ರತ್ನಾಕರ್ ಹಾಗೂ ಮೇಘಾ ಮುಂತಾದವರು ಉಪಸ್ಥಿತರಿದ್ದರು.