ಅನಾಥ ವಯೋವೃದ್ಧರು, ಮಕ್ಕಳಿಗೆ ಹೊಸ ಬಟ್ಟೆಗಳ ವಿತರಿಸಿ ಅರ್ಥಪೂರ್ಣ ಯುಗಾದಿ ಆಚರಣೆ

ಕಲಬುರಗಿ:ಏ.10: ಮಹಾಗಾಂವ ಕ್ರಾಸ್ ಸಮೀಪವಿರುವ ‘ಆಚಾರ್ಯ ಚಾಣಕ್ಯ ಟ್ರಸ್ಟ್’ನ ಅಡಿಯಲ್ಲಿ ಜರುಗುತ್ತಿರುವ ‘ಸಂಜೀವಿನಿ ವೃದ್ಧಾಶ್ರಮ’ ಹಾಗೂ ‘ಚಿಗುರು ನಿರ್ಗತಿಕ, ಅನಾಥ ಮತ್ತು ನಿರ್ಲಕ್ಷಿತರ ನಿಲಯ’ದಲ್ಲಿ ಮಕ್ಕಳಿಗೆ ಮಂಗಳವಾರ ಹೊಸ ಬಟ್ಟೆಗಳನ್ನು ವಿತರಿಸಿ, ಅರ್ಥಪೂರ್ಣವಾಗಿ ಅರ್ಥಪೂರ್ಣವಾಗಿ ಯುಗಾದಿ ಹಬ್ಬವನ್ನು ಆಚರಿಸಲಾಯಿತು.
ಬಟ್ಟೆಗಳನ್ನು ವಿತರಿಸಿ ಮಾತನಾಡಿದ ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ, ಹಿರಿಯರು, ವಯೋವೃದ್ಧರು ಮನೆ, ಸಮಾಜಕ್ಕೆ ಭಾರವಲ್ಲ. ಅವರು ತಮ್ಮ ವಯಸ್ಸಿನಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಕುಟುಂಬ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿರುತ್ತಾರೆ. ಅವರ ಇಳಿವಯಸ್ಸಿನಲ್ಲಿ ಕುಟುಂಬಕ್ಕೆ ಭಾರವೆಂದು ಭಾವಿಸಿ ವೃದ್ಧಾಶ್ರಮಕ್ಕೆ ನೂಕುವುದು ಅಮಾನವೀಯ ಕೃತ್ಯವಾಗಿದೆ. ಅವರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡಬೇಕು. ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಬೇಕು ಎಂದು ಹೇಳಿದರು.
ಟ್ರಸ್ಟ್‍ನ ಅಧ್ಯಕ್ಷ ಹಾಗೂ ಸಮಾಜ ಸೇವಕ ಶರಣು ಎ.ಕಮಠಾಣ ಮಾತನಾಡಿ, ನಮ್ಮ ವೃದ್ಧಾಶ್ರಮ ಮತ್ತು ಅನಾಥ ನಿಲಯದಲ್ಲಿ ವಯೋವೃದ್ಧರು, ಅನಾಥ ಮಕ್ಕಳಿದ್ದಾರೆ. ಅವರಲ್ಲಿ ದೇವರ ಸ್ವರೂಪವನ್ನು ಕಾಣುವ ಹಂಬಲ ನನ್ನದಾಗಿದ್ದು, ಇವರೆಲ್ಲರ ಸೇವೆಯೇ ದೇವರ ಸೇವೆ ಎಂದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೇನೆ. ಸ್ವಾರ್ಥ ಜೀವನ ನಡೆಸಿದರೆ ಬದುಕಿಗೆ ಅರ್ಥವಿಲ್ಲ. ವೈಯಕ್ತಿಕ ಜೀವನದ ಜೊತೆಗೆ ಸಮಾಜದಲ್ಲಿ ಅಗತ್ಯವುಳ್ಳವರಿಗೆ ಕೈಲಾದ ಸೇವೆಯನ್ನು ನೀಡಿದರೆ ಆತ್ಮತೃಪ್ತಿ ದೊರೆಯುವುದರ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಪೂಜಾ, ಶಿವಪುತ್ರ ಮಾಲಿಪಾಟೀಲ, ಕಾಮಣ್ಣ ಮದಗುಣಕಿ, ಸುಭದ್ರಾ ಬಿರಾದಾರ, ಶರಣಮ್ಮ ತಳವಾರ, ರುಕ್ಮೀಣಿ ಪಾಟೀಲ, ಚಂದ್ರಕಲಾ, ಮಹಾದೇವಿ ಮರಗುತ್ತಿ, ರತ್ನಾಬಾಯಿ ಸೇರಿದಂತೆ ವೃದ್ಧರು, ಮಕ್ಕಳು ಇದ್ದರು.