ಅನಾಥ ಮಕ್ಕಳಿಗೆ ಮೀಸಲಾತಿ ಸರ್ಕಾರಕ್ಕೆ ಆಯೋಗ ಶಿಫಾರಸು

ಬೆಂಗಳೂರು, ಮಾ.೧೫- ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಅನಾಥ ಮಕ್ಕಳಿಗೆ ಪ್ರವರ್ಗ ಒಂದರಲ್ಲಿ ಮೀಸಲಾತಿ, ಶಿಫಾರಸ್ಸನ್ನು ಮಾಡಲಾಗಿದ್ದು, ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗರ ಮೀಸಲಾತಿಗೆ ಆಯೋಗ ವರದಿಗೆ ಸಮಯಾವಕಾಶ ಕೇಳಿದ್ದು ಈ ಎರಡೂ ಸಮುದಾಯಗಳ ಮೀಸಲಾತಿ ಬೇಡಿಕೆಯ ಬಗ್ಗೆ ಪರಿಶೀಲನೆಗಳು ನಡೆದಿವೆ ಎಂದು ಆಯೋಗ ತಿಳಿಸಿದೆ.
ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ವಿವರ ನೀಡಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಪಂಚಮಸಾಲಿ ವಿಚಾರದಲ್ಲಿ ರಾಜ್ಯದಲ್ಲಿ ಓಡಾಡಿದ್ದೇವೆ. ಅವರ ಸ್ಥಿತಿಗತಿ ಅಧ್ಯಯನ ಮಾಡಿದ್ದೇವೆ. ಸರ್ಕಾರಿ ಉದ್ಯೋಗದಲ್ಲಿ ಎಷ್ಟು ಜನ ಇದ್ದಾರೆ. ಇತರ ಜಾತಿಯಲ್ಲಿ ಸರ್ಕಾರಿ ಉದ್ಯೋಗಗಳು ಎಷ್ಟು ಇವೆ ಎಂದು ಅಧ್ಯಯನ ಮಾಡಿದ್ದೇವೆ. ಇದನ್ನು ಸಾಫ್ಟ್‌ವೇರ್ ಸಿದ್ಧಪಡಿಸಿ ಸಲ್ಲಿಸಲಿದ್ದೇವೆ. ಒಕ್ಕಲಿಗರ ಮೀಸಲಾತಿ ಮನವಿಗೆ ಅವರು ವಾದ ಮಂಡಿಸಲು ಸಮಯ ಕೇಳಿದ್ದಾರೆ. ಹಾಗಾಗಿ ಈ ಬಗ್ಗೆಯೂ ವರದಿ ಸಲ್ಲಿಸಿಲ್ಲ ಎಂದರು.
ವೀರಶೈವ ಲಿಂಗಾಯತದಲ್ಲಿ ೩ಬಿ ಯಲ್ಲಿ ಎ ಮತ್ತು ಬಿ ಎಂಬ ವರ್ಗ ಇದೆ ಎ ನಲ್ಲಿ ವೀರಶೈವ ಲಿಂಗಾಯತ ಒಂದು ಜಾತಿ ಬಿ ಅಡಿ ೨೧ ಜಾತಿ ಇತ್ತು. ನಂತರ ೧೯ ಉಪಜಾತಿ ಸೇರಿಸಿ ಅದರಲ್ಲಿ ಪಂಚಮಸಾಲಿ ಬಿಟ್ಟು ಉಳಿದವನ್ನು ವಾಪಸ್ ಪಡೆಯಲಾಗಿದೆ. ಈಗ ವೀರಶೈವ ಲಿಂಗಾಯತ ಎ ನಲ್ಲಿ ಉಪಜಾತಿ ಯಾವುದು ಇರಲಿಲ್ಲ. ಅದಕ್ಕೂ ಒಂದು ವರದಿ ಕೊಟ್ಟಿದ್ದೇವೆ ಹಳೆಯದ್ದರ ಜತೆ ೨೨ ಜಾತಿ ಸೇರಿಸಿದ್ದು, ೪೫ ಜಾತಿಯಾಗಲಿದೆ. ಇದರಿಂದ ಉಪಜಾತಿಯವರಿಗೆ ಜಾತಿ ಪ್ರಮಾಣ ಪಡೆಯಲು ಸಹಾಯಕ ಆಗಲಿದೆ ಎಂದರು.
ಅನಾಥ ಮಕ್ಕಳಿಗೆ ಮೀಸಲಾತಿ
ತಂದೆ-ತಾಯಿ ಇಲ್ಲದ ಹಾಗೂ ಜಾತಿ ಗೊತ್ತಿರದ ಅನಾಥ ಮಕ್ಕಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸಿಕೊಡಬೇಕೆಂಬ ಸದುದ್ದೇಶದಿಂದ ಆಯೋಗವು ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡಿ ಆ ರಾಜ್ಯಗಳಲ್ಲಿ ಅನಾಥ ಮಕ್ಕಳಿಗೆ ಮೀಸಲಾತಿ ಒದಗಿಸಿರುವಂತೆ, ನಮ್ಮ ರಾಜ್ಯದಲ್ಲಿಯೂ ಸಹ ಮೀಸಲಾತಿ ಒದಗಿಸುವ ದೃಷ್ಟಿಯಿಂದ ವಿವಿಧ ಜಿಲ್ಲೆಗಳಲ್ಲಿರುವ ಅನಾಥಾಲಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದೇವೆ.
ಈ ಎಲ್ಲಾ ಮಾಹಿತಿಯನ್ನಾಧರಿಸಿ, ಜಾತಿ ತಿಳಿದಿರುವ ಮಕ್ಕಳಿಗೆ ಆಯಾ ಜಾತಿಯ ಪ್ರವರ್ಗದಡಿಯಲ್ಲಿ ಮತ್ತು ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಪ್ರವರ್ಗ-೧ ರಡಿಯಲ್ಲಿ ಮೀಸಲಾತಿ ಕಲ್ಪಿಸಿಕೊಡಬೇಕೆಂದು ಅಭಿಪ್ರಾಯಿಸಿ, ವಿಶೇಷ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಜಾತಿ ಪ್ರಮಾಣ ಪತ್ರ:
ಹಿಂದುಳಿದ ವರ್ಗಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರ ನೀಡುವಾಗ ಕರ್ನಾಟಕ ರಾಜ್ಯದ ಕೆನೆಪದರ ನೀತಿ ಅನ್ವಯ ಅಭ್ಯರ್ಥಿ ಮತ್ತು ತಂದೆ, ತಾಯಿ, ಗಂಡ, ಹೆಂಡತಿ ಇವರ ಒಟ್ಟು ಅದಾಯವನ್ನು ಪರಿಗಣಿಸಲಾಗುತ್ತಿದ್ದು, ಇದರಿಂದ ಔದ್ಯೋಗಿಕ ಮೀಸಲಾತಿಗಾಗಿ ಆದಾಯವನ್ನು ಪರಿಗಣಿಸುವಾಗ ಗೊಂದಲ ಉಂಟಾಗಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಪಡೆಯಲು ತೊಂದರೆಯಾಗುತ್ತಿದೆ.
ಈ ಬಗ್ಗೆ ಕೇಂದ್ರ ಸರ್ಕಾರವು ಹೊರಡಿಸಿರುವ ಆದೇಶದಂತೆ ಉದ್ಯೋಗ ಮೀಸಲಾತಿಗಾಗಿ ಆದಾಯವನ್ನು ಪರಿಗಣಿಸುವಾಗ ಕೇವಲ ಪೋಷಕರ ಆದಾಯವನ್ನು ಮಾತ್ರ ಪರಿಗಣಿಸುವ ಮಾದರಿಯನ್ನು ಕರ್ನಾಟಕ ಸರ್ಕಾರವು ಅಳವಡಿಸಿಕೊಂಡು ಜಾರಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಅಲ್ಲದೆ, ಈಗಾಗಲೇ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿರುವ ಆಲೆಮಾರಿ ಅರೆ ಅಲೆಮಾರಿ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ, ಜಾತಿಯ ಮುಂದೆ ಅಲೆಮಾರ, ಅರೆಅಲೆಮಾರಿ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರವನ್ನು ನೀಡುವ ಕುರಿತು ಶಿಫಾರಸ್ಸು ಮಾಡಲು ಆಯೋಗವು ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.
ಅಷ್ಟೇ ಅಲ್ಲದೆ, ಕೆಲವು ಜಾತಿಗಳ ಹೆಸರು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿಯೂ ಸಹ ಸೇರ್ಪಡೆಗೊಂಡಿದ್ದು, ಇದರಿಂದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಗೊಂದಲವುಂಟಾಗುತ್ತಿರುವುದು ಆಯೋಗದ ಗಮನಕ್ಕೆ ಬಂದಿರುತ್ತದೆ.
ಇಂತಹ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಿ ಹಾಗೂ ಕೆಲವು ಜಾತಿಗಳ ಹೆಸರುಗಳಲ್ಲಿನ ಅಗತ್ಯ ಕಾಗುಣಿತ ತಿದ್ದುಪಡಿ ಮಾಡಿ ಪರಿಷ್ಕೃತ ಮೀಸಲಾತಿ ಪಟ್ಟಿಯನ್ನು ಮುದ್ರಿಸಿ ಅದನ್ನು ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವಜನಿಕರ ಮಾಹಿತಿಗಾಗಿ ಒದಗಿಸಲಾಗುತ್ತದೆ.
ರಾಜ್ಯ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಈಗಾಗಲೇ ಸೇರ್ಪಡೆಗೊಂಡಿರುವ ಜಾತಿಗಳು, ಕರ್ನಾಟಕ ರಾಜ್ಯ ಕೇಂದ್ರ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿರುವ ಜಾತಿಗಳನ್ನು ಸಹ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಜೊತೆಗೆ ಕೇಂದ್ರ ಮಿಸಲಾತಿ ಪಟ್ಟಿಯಲ್ಲಿರುವ ಜಾತಿಗಳ ಕಾಗುಣಿತ, ಒತ್ತಕ್ಷರಗಳನ್ನು ತಿದ್ದುಪಡಿಗೂ ಕ್ರಮ ವಹಿಸಲಾಗಿದೆ ಎಂದರು.
ಒಟ್ಟಾರೆ ಪ್ರಸ್ತುತ ಆಯೋಗಕ್ಕೆ ಇದುವರೆಗೆ ಸುಮಾರು ೧೩೩ ಮನವಿಗಳು ಸಲ್ಲಿಕೆಯಾಗಿದ್ದು, ಅವುಗಳ ಬಹಿರಂಗ ವಿಚಾರಣೆ ನಡೆಸಿ, ಮನವಿದಾರ ಜನಾಂಗದವರು ವಾಸವಾಗಿರುವ ಸ್ಥಳಗಳಿಗೆ ಪ್ರವಾಸ ಕೈಗೊಂಡು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿ ಆದ್ಯತೆಯ ಮೇರೆಗೆ ಒಟ್ಟು ೩೪ ವರದಿಗಳನ್ನು ತಯಾರಿಸಲಾಗಿದೆ.
ಇನ್ನುಳಿದ ೪೨ ಮನವಿಗಳು ವರದಿ ಬಾಕಿ ಇದ್ದು, ಅವುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸುಮಾರು ೫೭ ಮನವಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಿಂದಿನ ಆಯೋಗಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅಂತಹ ಮನವಿಗಳಿಗೆ ಹಿಂಬರಹವನ್ನು ನೀಡಲಾಗಿರುತ್ತದೆ ಎಂದು ಹೆಗ್ಡೆ ವಿವರಿಸಿದರು.
ಸರ್ಕಾರದಿಂದ ಮಧ್ಯಂತರ ವರದಿ ನೀಡುವಂತೆ ಒತ್ತಡ ಇರಲಿಲ, ಮಧ್ಯಂತರ ವರದಿ ಅವಶ್ಯಕತೆ ಇತ್ತು. ಹಾಗಾಗಿ ಸಲ್ಲಿಕೆ ಮಾಡಿದ್ದೇವೆ, ಆದರೆ ಅಂತಿಮ ವರದಿಗೆ ಕಾಲಮಿತಿ ಹಾಕಿಕೊಳ್ಳಲು ಸಾಧ್ಯವಿಲ್ಲ. ಅಗತ್ಯ ಸಮಯ ಪಡೆದೇ ವರದಿ ನೀಡುತ್ತೇವೆ ಎಂದು ಡಾ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಹೆಚ್.ಎಸ್.ಕಲ್ಯಾಣ ಕುಮಾರ್, ಬಿ.ಎಸ್.ರಾಜಶೇಖರ್, ಕೆ.ಟಿ.ಸುವರ್ಣಾ, ಅರುಣಕುಮಾರ್, ಶಾರಾದಾ ನಾಯ್ಕ್ ಸೇರಿದಂತೆ ಪ್ರಮುಖರಿದ್ದರು.