ಅನಾಥ ಮಕ್ಕಳಿಗೆ ಮಹಾಂತಜ್ಯೋತಿ ವಿದ್ಯಾಪೀಠದಲ್ಲಿ ಉಚಿತ ಶಿಕ್ಷಣ

ಕಲಬುರಗಿ:ಮೇ.29: ಕೊರೊನಾದಿಂದ ಪೋಷಕರನ್ನು ( ತಂದೆ- ತಾಯಿ) ಕಳೆದುಕೊಂಡು ಅನಾಥ ಹಾಗೂ ಸಂಕಷ್ಟ ಕ್ಕೆ ಒಳಗಾದ ಮಕ್ಕಳಿಗೆ ಅಫಜಲಪುರ ತಾಲೂಕಿನ ಧರ್ಮಕ್ಷೇತ್ರ ಮಹಾಂತಪುರ- ಚಿನ್ಮಯಗಿರಿ ಮಹಾಂತಜ್ಯೋತಿ ವಿದ್ಯಾಪೀಠ ಅನ್ನ ದಾಸೋಹದೊಂದಿಗೆ ಉಚಿತ ಶಿಕ್ಷಣ ಹಾಗೂ ವಸತಿ ಸೌಕರ್ಯ ಕಲ್ಪಿಸುವುದಾಗಿ ಘೋಷಿಸಿದೆ.

ಕೊರೊನಾದಿಂದ ಹಲವರು ಸಂಕಷ್ಟಕ್ಕೆ ಒಳಗಾಗಿದ್ದು, ಅದರಲ್ಲೂ ಹಲವಾರು ಮಕ್ಕಳ ತಂದೆ- ತಾಯಿ ಮೃತಪಟ್ಟಿರುವುದು ಅತ್ಯಂತ ದು:ಖದ ಸಂಗತಿಯಾಗಿದೆ. ಇಂತಹ ಸಮಯದಲ್ಲಿ ಮಕ್ಕಳಿಗೆ ಸಹಾಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆ ಯಿಂದ ಹಿಡಿದು ಪದವಿ ಶಿಕ್ಷಣ ವರೆಗೂ ಉಚಿತ ಶಿಕ್ಷಣ ವಸತಿಯೊಂದಿಗೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಮಹಾಂತಜ್ಯೋತಿ ವಿದ್ಯಾಪೀಠದ ಅಧ್ಯಕ್ಷರಾದ ಪರಮ ಪೂಜ್ಯ ಸಿದ್ದರಾಮ ಶಿವಾಚಾರ್ಯರು ಹಾಗೂ ಪೂಜ್ಯ ವೀರಮಹಾಂತ ಶಿವಾಚಾರ್ಯರರು ತಿಳಿಸಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಮಹಾಂತಜ್ಯೋತಿ ವಿದ್ಯಾಪೀಠವು ಕಷ್ಟದಲ್ಲಿರುವ ಮಕ್ಕಳಿಗೆ ಆಶ್ರಯದೊಂದಿಗೆ ಶಿಕ್ಷಣ ನೀಡುತ್ತಾ ಸಹಸ್ರಾರು ವಿದ್ಯಾರ್ಥಿಗಳಿಗೆ ದಾರಿ ಕಲ್ಪಿಸುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ವಿಷಯ. ಪೂಜ್ಯರು ಪ್ರಸಕ್ತ ಸಂಕಷ್ಟದ ಸಮಯ ಹಾಗೂ ಸಂದರ್ಭಕ್ಕೆ ಮನ ಮಿಡಿದಿದ್ದು, ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಎಷ್ಟೇ ಸಂಖ್ಯೆಯಲ್ಲಿ ಬಂದರೂ ಉಚಿತ ಶಿಕ್ಷಣ, ವಸತಿ ಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದು ಸಂಸ್ಥೆಯ ಸಹ ಅಧ್ಯಕ್ಷ ಡಾ. ಎಸ್.ಎಂ. ಜೋಗದ ಹಾಗೂ ಚೆನ್ನಬಸಯ್ಯ ಜಿ. ಹಿರೇಮಠ ಅವರು ತಿಳಿಸಿದ್ದಾರೆ.