ಅನಾಥವಾದ ರಸ್ತೆ

ಲಕ್ಷ್ಮೇಶ್ವರ,ಮೇ16: ಗದಗ ಹಾವೇರಿ ಮಧ್ಯದ ರಾಜ್ಯ ಹೆದ್ದಾರಿ ಲಕ್ಷ್ಮೇಶ್ವರದ ಸಣೂರು ಕ್ರಾಸಿನಿಂದ ಗುಲಗಂಜಿಕೊಪ್ಪ ಕ್ರಾಸ್ವರೆಗಿನ ರಸ್ತೆ ಸಂಪೂರ್ಣ ತುಂಡು ತುಂಡಾಗಿದ್ದು ಈ ರಸ್ತೆ ವಾರಸುದಾರರಿಲ್ಲದೆ ಅನಾಥವಾಗಿದೆ.
ಈ ರಸ್ತೆಯ ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಹಾವೇರಿ ಮತ್ತು ಗದಗ ಮಧ್ಯ ಸಂಚರಿಸುತ್ತಿದ್ದು ಬಹುತೇಕ ವಾಹನ ಸವಾರರು ಎಡಗೈ ಮುಷ್ಟಿಯಲ್ಲಿ ಜೀವ ಹಿಡಿದುಕೊಂಡು ಸಾಗುವ ಸ್ಥಿತಿ ಇಲ್ಲಿದೆ.
ಅಪರಿಚಿತ ವಾಹನ ಸವಾರರು ರಾತ್ರಿ ವೇಳೆ ಈ ರಸ್ತೆಯ ಮೇಲೆ ಅದರಲ್ಲೂ ದ್ವಿಚಕ್ರ ವಾಹನ ಸವಾರರು ಮನೆ ಮುಟ್ಟಿದರೆ ಅಬ್ಬಾ ಎನ್ನುತ್ತಾರೆ. ಕಳೆದ ಒಂದು ವರ್ಷದಿಂದ ಈ ರಸ್ತೆಯ ಬಗ್ಗೆ ಅನೇಕ ಹೋರಾಟಗಳು ಪ್ರತಿಭಟನೆಗಳು ನಡೆದರೂ ಸಹ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯವರೇ ಆಗಿದ್ದ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಅವರು ತಲೆಕೆಡಿಸಿಕೊಳ್ಳಲಿಲ್ಲ.
ಈಗ ಈ ರಸ್ತೆಯ ಕಾಮಗಾರಿಯು ಸುಮಾರು 9 ಕೋಟಿ ವೆಚ್ಚದಲ್ಲಿ ನಡೆದಿದ್ದರೂ ಕುಂಟುತ್ತಾ ಸಾಗಿರುವ ಈ ಕಾಮಗಾರಿ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕೊನೆಯ ಪಕ್ಷ ಲೋಕೋಪಯೋಗಿ ಇಲಾಖೆಯವರು ಕಳೆದ ಎರಡು ತಿಂಗಳ ಹಿಂದೆ ಕೋಟಿ ಕೋಟಿ ಹಣ ಗುಂಡಿ ಮುಚ್ಚಲು ಬಂದಿದ್ದರು ಸಹ ಹಿಡಿ ಮಣ್ಣು ಹಾಕದಿರುವುದು ಸರ್ಕಾರದ ಅನುದಾನವನ್ನು ಯರ್ರಾಬಿರ್ರಿ ಬಳಸಿರುವ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಏನೇ ಆಗಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರಾಗಲಿ ಅಥವಾ ಅಧಿಕಾರಿಗಳಾಗಲಿ ರಸ್ತೆಯ ಗುಂಡಿಗಳನ್ನು ಸಾರ್ವಜನಿಕರ ಪ್ರಾಣವನ್ನು ಕಾಪಾಡಬೇಕು ಎಂಬುದು ಜನರ ಅಂಬೋಣವಾಗಿದೆ.