“ಅನಾಥವಾದ ಜಿಲ್ಲಾ ಗುರುಭವನ” ಗುರಿಯೂ ಇಲ್ಲಾ, ಗುರುವೂ ಇಲ್ಲಾ, ಆರಂಭವಾಗದೆ ಅವಸಾನದತ್ತ…

ಅನಂತ ಜೋಶಿ
ಹೊಸಪೇಟೆ, ಮಾ.27: ಹಿಂದೆ ಹಿರಿಯರೇ ಹೇಳಿದ ಮಾತು, ಮುಂದೆ ಗುರಿ, ಹಿಂದೆ ಗುರು ಇದ್ದರೆ ಏನುಬೇಕಾದರೂ ಸಾಧಿಸಬಹುದು ಅಂತ. ಆದರೆ ಇಂತಹ ಜ್ಞಾನವನ್ನು ನೀಡಬೇಕಾದ ಗುರುಗಳೇ ತಮ್ಮ ಸಾಧನೆಗೆ ಗುರಿ ಮತ್ತು ಗುರುಗಳಿಲ್ಲಂತೆ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಿದ “ಜಿಲ್ಲಾ ಗುರುಭವನ”ವನ್ನು ಅವಸಾನಕ್ಕೆ ತಂದು ನಿಲ್ಲಿಸಿದ್ದಾರೆ.
ಹೌದು! ಅಖಂಡ ಬಳ್ಳಾರಿ ಜಿಲ್ಲೆಯ ಶಿಕ್ಷಕರ ಒಂದು ದಿನದ ವೇತನ ದಾನವಾಗಿ ಪಡೆದು, ಅಲ್ಲದೆ ಭೂಸೇನಾ ನಿಗಮದಿಂದ ಲಕ್ಷಾಂತರ ವೆಚ್ಚದಲ್ಲಿ ಕಳೆದ 20 ವರ್ಷಗಳ ಹಿಂದೆಯೇ ಶಿಕ್ಷಕರ ತರಬೇತಿ, ಸಾವಿರಾರು ಸಂಖ್ಯೆಯ ಶಿಕ್ಷಕರ ಕುಟುಂಬಗಳಿಗೆ ಹೊರೆಯಾಗದಂತೆ ಮದುವೆ, ಮುಂಜಿವೆ, ಹುಟ್ಟುಹಬ್ಬ ಸೇರಿದಂತೆ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ನೆರವಾಗುವಂತೆ ವ್ಯವಸ್ಥಿತವಾಗಿ ಎರಡು ಅಂತಸ್ಥಿತಿನಲ್ಲಿ ನಿರ್ಮಾಣ ಮಾಡಿದ “ಜಿಲ್ಲಾ ಗುರುಭವನ” ಇಂದು ಆರಂಭವಾಗದೇ ಅವನತಿಗೆ ಎದುರು ನೋಡುತ್ತಿದೆ.
1985-86ನೇ ಸಾಲಿನಲ್ಲಿ ಸಮಾನ ಮನಸ್ಕ ಶಿಕ್ಷಕರ ಒತ್ತಾಯದ ಮೇರೆಗೆ ಇಲಾಖಾಧಿಕಾರಿಗಳು ಎಲ್ಲಾ ಅವಶ್ಯಕತೆಗಳನ್ನು ಮನಗಂಡು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಸರಿನಲ್ಲಿ ಜಾಗ ಖರೀದಿಸಿ ಜಿಲ್ಲೆಯ ಎಲ್ಲಾ ಶಿಕ್ಷಕರ ಒಂದು ದಿನದ ವೇತನವನ್ನು ಸಂಗ್ರಹಿಸಿ ಇಲಾಖೆಗೆ ನೀಡುವ ಮೂಲಕ ಜಿಲ್ಲಾ ಗುರುಭವನ ನಿರ್ಮಾಣಕ್ಕೆ ಅಣಿಯಾಗಿದ್ದು ಇಲಾಖಾಧಿಕಾರಿಗಳ ಮಧ್ಯದ ಸಮಸ್ವಯತೆಯ ಕೊರತೆ ಭೂಸೇನಾ ನಿಗಮ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಸಂಘ ಹೀಗೆ ಅರೊಂದು, ಇವರೊಂದು ಹೇಳಿಕೆಗಳ ಮೂಲಕ ‘ಕೊರಳಿಗೆ ಘಂಟೆ ಕಟ್ಟೋರ್ಯಾರು’ ? ಎಂಬಂತೆ ಅನಾಥವಾಗುತ್ತಾ ಬಂತು ಯಾರಾದರೂ ಬಂದು ಏನಾದರೂ ಕೇಳಿದರು ಎಂದರೆ ನಾವು ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಎನ್ನುವ ಮೂಲಕ ಹಾರಿಕೆ ಉತ್ತರಗಳಲ್ಲಿಯೇ ಕಾಲಹರಣ ಮಾಡಿ ಇಂದು ಅವಸಾನದ ಅಂಚಿಗೆ ತಂದು ನಿಲ್ಲಿಸಿದ್ದಾರೆ.
ಈ ಕುರಿತು ಅನೇಕ ಶಿಕ್ಷಕರಿಗೆ ನೋವಿದೆಯಾದರೂ ಯಾರು ಮುಕ್ತವಾಗಿ ಮಾತನಾಡುವ ಸಾಹಸಕ್ಕೂ ಕೈಹಾಕಿಲ್ಲಾ, ಸದ್ಯ ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ಗುರುಭವನ ಸಮಿತಿಯ ಸದಸ್ಯರಾಗಿರುವವರು ಸಣ್ಣ ಮಟ್ಟಿನ ಆಸಕ್ತಿ ತೋರಿದ್ದಾರಾದರೂ ಇದನ್ನು ತೆರವುಗೊಳಿಸಿ ಹೊಸ ನಿರ್ಮಾಣಕ್ಕೆ ಮುಂದಾಗೊ ಆಸೆಯವನ್ನೆ ಹೊಂದಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧಿಕಾರವ್ಯಾಪ್ತಿಗೆ ಜಾಗವನ್ನು ಪಡೆಯುವ ಮೂಲಕ ಸಚಿವ ಆನಂದಸಿಂಗ್‍ರವರನ್ನು ಕಂಡು ಹೊಸ ಆಲೋಚನೆಯೊಂದಿಗೆ ಕಾರ್ಯನಿರ್ವಹಿಸಲು ಯೋಚಿಸಲಾಗಿದೆ. ಈ ಕುರಿತು ಇಲಾಖಾಧಿಕಾರಿಗಳೊಂದಿಗೆ ಪತ್ರವ್ಯವಹಾರ ಮಾಡಲಾಗಿದೆ. ಸಚಿವರು ನಿಮ್ಮ ಅಧಿಕಾರ ವ್ಯಾಪ್ತಿಗೆ ದಾಖಲಾತಿ ನೀಡಿದರೆ ಜಿಲ್ಲಾ ಖನಿಜ ನಿಧಿಯೊ ಅಥವಾ ವಿಶೇಷ ಅನುದಾನದಲ್ಲಿಯೊ ಮಾದರಿ ನೂತನ “ವಿಜಯನಗರ ಜಿಲ್ಲಾ ಗುರುಭವನ” ನಿರ್ಮಾಣಕ್ಕೆ ಮುಂದಾಗಬಹುದು ಎಂದಿದ್ದಾರೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ.
ಶಿಕ್ಷಕರ ಸಂಘದಿಂದ ಈ ಬಾರಿ ನಾನು ಸಮಿತಿ ಸದಸ್ಯನಾಗಿದ್ದೇನೆ ನಮ್ಮ ಸಂಘದ ಮೊದಲ ಆಧ್ಯತೆ ಗುರುಭವನ ನಿರ್ಮಾಣಕ್ಕೆ, ಈ ಕುರಿತು ಯೋಜನೆ ಆರಂಭಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಶಿಕ್ಷಕರ ಸಂಘದ ಗುರುಭವನ ಸಮಿತಿ ಸದಸ್ಯ ಎಲ್, ದ್ಯಾಮಾನಾಯ್ಕ್