‘ಅನಾಥಪ್ರಜ್ಞೆ’ ಯಿಂದ ಬಳಲುತ್ತಿದೆ ಪುತ್ತೂರಿನ ‘ಚಿಣ್ಣರ ಪಾರ್ಕ್’

ಪುತ್ತೂರು, ಜ.೮- ಮಕ್ಕಳ ಚಟುವಟಿಕೆಗಾಗಿ ನಿರ್ಮಾಣಗೊಂಡ ಚಿಣ್ಣರ ಪಾರ್ಕೊಂದು ಪ್ರಸ್ತುತ ಯಾರಿಗೂ ಬೇಡವಾಗಿ ಮೂಲೆಗುಂಪಾಗಿರುವ ಸ್ಥಿತಿಯಲ್ಲಿ ಅನಾಥಪ್ರಜ್ಞೆಯಿಂದ ಬಳಲುತ್ತಿದೆ. ಪುತ್ತೂರಿನ ಹೃದಯಭಾಗದಲ್ಲಿರುವ ಈ ಮಕ್ಕಳ ಪಾರ್ಕ್ ಸಮರ್ಪಕವಾದ ಕಾಯಕಲ್ಪಕ್ಕಾಗಿ ನಗರಸಭೆಯತ್ತ ಮುಖ ಮಾಡಿ ಕಾಯುತ್ತಿದೆ..!


ಪುತ್ತೂರು ನಗರಸಭೆಯ ಆಡಳಿತಕ್ಕೆ ಒಳಪಟ್ಟಿರುವ ಈ ಪಾರ್ಕಿಗೆ ರೂ.೧೩ ಲಕ್ಷ ವೆಚ್ಚಮಾಡಿ ನಿರ್ಮಿಸಲಾದ ಈ ವ್ಯವಸ್ಥೆ ಪಾಳು ಬಿದ್ದು ಹಾಳಾಗುವ ಮೊದಲು ನಗರಸಭೆ ಎಚ್ಚೆತ್ತುಕೊಳ್ಳಬೇಕಾಗಿದೆ. ೨೦೦೯-೧೦ನೇ ಸಾಲಿನಲ್ಲಿ ಪುರಸಭೆಯ ಅಧ್ಯಕ್ಷ ರಾಜೇಶ್ ಬನ್ನೂರು ಮುತುವರ್ಜಿಯಿಂದ ಚೈತನ್ಯಶೀಲವಾದ ಈ ಚಿಣ್ಣರ ಪಾರ್ಕ್ ತನ್ನ ಮೂಲ ಆಶಯದಿಂದ ಸಂಪೂರ್ಣ ದೂರವಾಗಿದೆ. ಮಕ್ಕಳಿಗಾಗಿ ಗುಹೆ, ಮಕ್ಕಳ ನಾಟಕ ಹಾಗೂ ಇತರ ಕಾರ್ಯಕ್ರಮಗಳಿಗಾಗಿ ನಿರ್ಮಿಸಿದ ಬಯಲು ರಂಗಮಂದಿರ ಈಗ ದಿಕ್ಕಿಲ್ಲದವರ ಸೊತ್ತಾಗಿದೆ. ಆರಂಭದಲ್ಲಿ ಒಂದೆರಡು ಕಾರ್ಯಕ್ರಮಗಳು ಇಲ್ಲಿ ನಡೆದಿದ್ದಾರೂ ನಂತರ ಇಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ. ಈಗಂತೂ ಇಲ್ಲಿ ಕಾರ್ಯಕ್ರಮ ಮಾಡುವ ಸ್ಥಿತಿಯೂ ಇಲ್ಲ.
ಕುಡುಕರ ತಾಣ
ಪುತ್ತೂರಿನ ಚಿಣ್ಣರಿಗಾಗಿ ನಿರ್ಮಿಸಿದ ಈ ಪಾರ್ಕ್ ಪ್ರಸ್ತುತ ಕಾಡು ಬೆಳೆದು ಕುಡುಕರಿಗೆ ಖುಷಿ ಕೊಡುವ ತಾಣವಾಗಿ ಬದಲಾಗಿದೆ. ಪಾರ್ಕಿನಲ್ಲಿ ಸಂಪೂರ್ಣ ಗಿಡಗಂಟಿಗಳು ತುಂಬಿ ಪೋಕರಿಗಳಿಗೂ ಆಶ್ರಯ ನೀಡುತ್ತಿದೆ. ಪಾರ್ಕಿನಲ್ಲಿ ಮದ್ಯದ ಬಾಟಲುಗಳು, ಅನೈತಿಕ ಚಟುವಟಿಕೆಯ ಕುರುಹುಗಳು ಕಾಣಸಿಗುತ್ತವೆ. ರಸ್ತೆ ಬದಿಯ ವಾಹನ ತ್ಯಾಜ್ಯಗಳನ್ನು ಡಂಪ್ ಮಾಡುವ ‘ಡಂಪಿಂಗ್ ಯಾರ್ಡ್’ ಆಗಿ ಬದಲಾವಣೆಯಾಗಿದೆ. ಇದರಿಂದಾಗಿ ಇಲ್ಲಿಗೆ ಮಕ್ಖಳು ಬಿಡಿ ಹಿರಿಯ ನಾಗರಿಕರೂ ಬರುವ ಹಾಗಿಲ್ಲ. ಆಕರ್ಷಕ ತಾಣವಾಗಿರಬೇಕಾದ ಚಿಣ್ಣರ ಪಾರ್ಕ್ ಆಕರ್ಷಣೆ ಕಳೆದುಕೊಂಡು ನಿರುಪಯುಕ್ತ ಸ್ಥಳವಾಗಿದೆ.
ಪಾರ್ಕಿನ ಒಂದು ಭಾಗದಲ್ಲಿ ಮಹಿಳಾ ಕಾಲೇಜು, ಸರ್ಕಾರಿ ಆಸ್ಪತ್ರೆಗಳಿದ್ದು, ಕಾಲೇಜಿನ ವಿದ್ಯಾರ್ಥಿನಿಯರು, ಆಸ್ಪತ್ರೆಗೆ ಬರುವ ಮಂದಿಗೂ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಅನುಕೂಲ ಸ್ಥಳವಾಗಿದೆ. ಸಂಜೆ ಹೊತ್ತು ಹಿರಿಯ ನಾಗರಿಕರು ಗಾಳಿ ಸೇವನೆಗೂ ಈ ಪಾರ್ಕ್ ಉಪಯೋಗವಾಗುತ್ತಿತ್ತು. ಆದರೆ ಇದೀಗ ಎಲ್ಲವೂ ಮರೀಚಿಕೆಯಾಗಿದೆ. ಮಕ್ಕಳಿಗಾಗಿ ನಿರ್ಮಾಣವಾದ ಈ ಸುಂದರ ಸ್ಥಳ ತ್ಯಾಜ್ಯದ ಕೊಂಪೆಯಾದರೂ ನಗರಸಭೆಯ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಈ ಹಿಂದೆ ಪಾರ್ಕ್‌ನ್ನು ಮೇಲುಸ್ತುವಾರಿ ಮಾಡಲು ಸಂಘಸಂಸ್ಥೆಗಳಿಗೆ ನೀಡುವ ಪ್ರಸ್ತಾಪವೂ ನೆನೆಗುದಿಗೆ ಬಿದ್ದಿದೆ. ಇನ್ನಾದರೂ ಸುಂದರ ತಾಣಕ್ಕೆ ಬಣ್ಣ ತುಂಬುವ ಕೆಲಸ ನಗರಸಭೆಯ ಆಡಳಿತ ನಡೆಸುವ ಮೂಲಕ ಇದೊಂದು ನೈಜ ಪಾರ್ಕಾಗಿ ಬದಲಾವಣೆಯಾಗಲಿ ಎಂಬುವುದು ಇಲ್ಲಿನ ಚಿಣ್ಣರ ಆಶಯ.