ಅನಾಗರಿಕ ಧರ್ಮಪಾಲ 158ನೇ ಜಯಂತಿ ಆಚರಣೆ

ಕಲಬುರಗಿ,ಸೆ.18-ಇಲ್ಲಿನ ಅಂಬೇಡ್ಕರ್ ನಗರದ (ಸಿಐಬಿ ಕಾಲೊನಿ) ಬುದ್ಧ ವಿಹಾರದಲ್ಲಿ ಶನಿವಾರ ತ್ರಿರತ್ನ ಬೌದ್ಧ ಮಹಾಸಂಘದ ವತಿಯಿಂದ ಆಧುನಿಕ ಬೋಧಿಸತ್ವ ಅನಾಗರಿಕ ಧರ್ಮಪಾಲ ಅವರ 158ನೇ ಜನ್ಮದಿನವನ್ನು ಆಚರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ದೀಪನ್ ಕುಮಾರ್ ಸಪ್ತಾಂಗ ಪೂಜೆ ನೆರವೇರಿಸಿದರು. ಭಿಕ್ಕು ಬೋಧಿಧಮ್ಮ ಹಾಗೂ ಇತರರು ಪೂಜೆ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ಧಮ್ಮಚಾರಿ ವಜ್ರರಾಜ್ ಮಾತನಾಡಿ, ‘1891ರಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಬಂದ ಅನಾಗರಿಕ ಧರ್ಮಪಾಲ ಅವರು, ಬಿಹಾರದ ಬುದ್ಧಗಯಾದ ಬೌದ್ಧ ವಿಹಾರವನ್ನು ಹಿಂದೂ ಪಂಡಿತರ ವಶದಿಂದ ಬಿಡಿಸಲು ಬಹಳಷ್ಟು ಯತ್ನಿಸಿದ್ದರು. ಭಾರತದಲ್ಲಿ ಬೌದ್ಧ ಧರ್ಮದ ಪ್ರಚಾರ ಹಾಗೂ ಬೆಳವಣಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ’ ಎಂದು ಹೇಳಿದರು.
‘ಧಮ್ಮದ ಪಾಲನೆ ಹಾಗೂ ಧಮ್ಮದ ಅಧ್ಯಯನ ಹಾಗೂ ಪ್ರಚಾರ ಮಾಡುವುದು ಅನಾಗರಿಕ ಧರ್ಮಪಾಲ ಅವರ ಉದ್ದೇಶವಾಗಿತ್ತು. ತಮ್ಮ ಜೀವನವನ್ನು ಧಮ್ಮದ ಬೆಳವಣಿಗೆಗೆ ಮುಡುಪಿಟ್ಟಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿನಯದರ್ಶಿ, ಭಿಕ್ಕು ಬೋಧಿಧಮ್ಮ ಹಾಗೂ ಧಮ್ಮಚಾರಿಗಳು, ಧಮ್ಮಮಿತ್ರರು ಹಾಜರಿದ್ದರು.