ಅನರ್ಹ ಪಡಿತರ ಚೀಟಿ ಹಿಂದಿರುಗಿಸಲು ಜೂ.30 ರವರೆಗೆ ಅವಕಾಶ

ದಾವಣಗೆರೆ, ಜೂ.3: ಅನರ್ಹರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಲ್ಲಿ, ಅಂತಹ ಬಿಪಿಎಲ್ ಪಡಿತರ ಚೀಟಿಯನ್ನು ಹಿಂದಿರುಗಿಸಲು ಜೂ. 30 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರಾಗಿರುವ ಕುಟುಂಬಗಳು ತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಇಲಾಖೆ ಮಾನದಂಡಗಳನ್ನು ಮರೆಮಾಚಿ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರು ಸ್ವಯಂ ಪ್ರೇರಿತರಾಗಿ ಪಡಿತರ ಚೀಟಿಗಳನ್ನು ಹಿಂದಿರುಗಿಸುವ ಅವಧಿಯನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ. ಖಾಯಂ ನೌಕರರು, ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸೌಮ್ಯದ ಸಂಸ್ಥೆಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚಿನ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರು, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ವಾರ್ಷಿಕವಾಗಿ ರೂ.1,20,000 ಆದಾಯ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಹೊಂದಿರುವುದನ್ನು ಹೊರತುಪಡಿಸಿ 4 ಚಕ್ರದ ವಾಹನವನ್ನು ಹೊಂದಿರುವವರು, ಒಂದೇ ಮನೆಯಲ್ಲಿ ವಾಸವಿದ್ದು, ಒಂದಕ್ಕಿAತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವವರು, ಸ್ಥಳಾಂತರಗೊAಡಿರುವ ಕುಟುಂಬಗಳು, ಮರಣ ಹೊಂದಿರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಸದೇ ಇರುವುದು ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹವಾಗಿರುತ್ತದೆ. ಇಲಾಖೆಯಿಂದ ನಿಯಮಬಾಹಿರವಾಗಿ ಕಾರ್ಡ್ ಹೊಂದಿರುವ ಕುಟುಂಬಗಳನ್ನು ತನಿಖೆ ನಡೆಸಲಾಗುತ್ತಿದ್ದು, ಪಡಿತರ ಚೀಟಿದಾರರು ಸ್ವಯಂ ಪ್ರೇರಿತರಾಗಿ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಕೂಡಲೇ ಕಾರ್ಡ್ ಹಿಂದಿರುಗಿಸಿ ಆದ್ಯತೇತರ (ಎಪಿಎಲ್) ಪಡಿತರ ಚೀಟಿಯನ್ನು ತಕ್ಷಣ ಪಡೆಯಬಹುದು. ತಪ್ಪಿದಲ್ಲಿ ಸರ್ಕಾರದ ಆದೇಶಂತೆ ಹಾಗೂ ಭಾರತ ದಂಡ ಸಂಹಿತೆ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ಅನರ್ಹರು ಹೊಂದಿರುವ ಪಡಿತರ ಚೀಟಿಗಳನ್ನು ಸ್ವಯಂ ಪ್ರೇರಿತರಾಗಿ ಬದಲಾಯಿಸಿಕೊಳ್ಳಲು ಈ ಹಿಂದೆ ಏಪ್ರಿಲ್ 15 ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿತ್ತು. ಈ ಅವಧಿಯನ್ನು ಇದೀಗ ಜೂ.30 ರವರೆಗೆ ವಿಸ್ತರಿಸಿ ಕೊನೆಯ ಅವಕಾಶ ನೀಡಲಾಗಿದೆ ಎಂದು ದಾವಣಗೆರೆ ತಹಶೀಲ್ದಾರ್ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.