ಅನಧೀಕೃತ ಒಳಚರಂಡಿ ಸಂಪರ್ಕಗಳನ್ನು ಸಕ್ರಮಗೊಳಿಸಲು ಅಭಿಯಾನ

ಕಲಬುರಗಿ,ಜೂ.07:ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಕಲಬುರಗಿ ನಗರದಲ್ಲಿರುವ ಅನಧೀಕೃತ ಒಳಚರಂಡಿ ಸಂಪರ್ಕಗಳನ್ನು ಸಕ್ರಮಗೊಳಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ನಗರದಲ್ಲಿ ಒಳಚರಂಡಿ ಸಂಪರ್ಕ ಹೊಂದಿರುವ ಗೃಹ, ಗೃಹೇತರ ಹಾಗೂ ವಾಣಿಜ್ಯ ಬಳಕೆದಾರರು ಈ ಅವಕಾಶದ ಸದುಪಯೋಗ ಪಡೆದುಕೊಂಡು ನಿಗದಿತ ಶುಲ್ಕ ಭರಿಸಿ ತಮ್ಮ ಒಳಚರಂಡಿ ಸಂಪರ್ಕಗಳನ್ನು ಸಕ್ರಮಗೊಳಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಲಬುರಗಿ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಎನ್. ನರಸಿಂಹ ರೆಡ್ಡಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಲಬುರಗಿ ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಮನೆಗಳಿಗೆ ಹೋಗಿ ಒಳಚರಂಡಿ ಸಂಪರ್ಕಗಳನ್ನು ಸಕ್ರಮಗೊಳಿಸಲು ಕಲಬುರಗಿಯ ಮೆ|| ಮಾಸ್ಟರ್‍ಮೈಂಡ್ ಮ್ಯಾನ್‍ಪವರ್ ಮತ್ತು ಸೆಕ್ಯೂರಿಟಿ ಏಜೆನ್ಸಿ ಇವರಿಗೆ ಒಪ್ಪಂದದ ಮೇರೆಗೆ ಈ ಕೆಲಸ ವಹಿಸಿಕೊಡಲಾಗಿದೆ. ಸದರಿ ಏಜೆನ್ಸಿಯ ಸಿಬ್ಬಂದಿಗಳಿಗೆ ಗುರುತಿನ ಚೀಟಿ ಒದಗಿಸಲಾಗಿದ್ದು, ಅವರು ತಮ್ಮ ಮನೆಗೆ/ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿದಾಗ ಅವರಿಗೆ ಸಹಕಾರ ನೀಡಿ ಅರ್ಜಿ ಹಾಗೂ ದಾಖಲೆನ್ನೊಳಗೊಂಡ ಸರಿಯಾಗಿ ಮಾಹಿತಿ ನೀಡಿ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ನಿಗದಿಪಡಿಸಿದ ಶುಲ್ಕ ಭರಿಸಿ ತಮ್ಮ ಒಳಚರಂಡಿ ಸಂಪರ್ಕಗಳನ್ನು ಸಕ್ರಮಗೊಳಿಸಬೇಕು.
ಸಾರ್ವಜನಿಕರು ತಮ್ಮ ಒಳಚರಂಡಿ ಸಂಪರ್ಕಗಳನ್ನು ಅಧಿಕೃತಗೊಳಿಸಿ ನಿಯಮಿತವಾಗಿ ಒಳಚರಂಡಿ ಶುಲ್ಕವನ್ನು ಭರಿಸಿದ್ದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಲು ಸಹಕಾರಿಯಾಗಲಿದೆ. ಈ ಅವಕಾಶವು ಕಾಲಮಿತಿಯಲ್ಲಿ ಇದ್ದು, ಜನರು ತಮ್ಮ ಅನಧಿಕೃತ ಸಂಪರ್ಕಗಳನ್ನು ಬೇಗನೆ ಅಧಿಕೃತಗೊಳಿಸದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.