ಅನಧಿಕೃತ ಮೀನುಗಾರಿಕೆ ನಡೆಯದಂತೆ ಎಚ್ಚರವಹಿಸಿ

ಉಡುಪಿ, ಎ.೨- ಅರಬಿ ಸಮುದ್ರದಲ್ಲಿ ಯಾವುದೇ ರೀತಿಯ ಅನಧಿಕೃತ ಹಾಗೂ ನಿಷೇಧಿತ ಮೀನುಗಾರಿಕಾ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರವಹಿಸಬೇಕು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಪಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲೆಯ ಪಶುಪಾಲನೆ ಮತ್ತು ಮೀನುಗಾರಿಕಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಬಂದರುಗಳಲ್ಲಿ ಮೀನುಗಾರರು ತಪ್ಪದೇ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸುರಕ್ಷತಾ ಅಂತರ ಪಾಲನೆ ಹಾಗೂ ಕೈಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು. ಸಮುದ್ರದಲ್ಲಿ ಅಪಘಾತಕ್ಕೀಡಾದವರನ್ನು ರಕ್ಷಿಸಿ, ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸಿ-ಆಂಬುಲೆನ್ಸ್ ಬೋಟ್ ಅನ್ನು ಶೀಘ್ರದಲ್ಲಿಯೇ ನಿಯೋಜಿಸಲಾಗುವುದು ಎಂದವರು ತಿಳಿಸಿದರು. ಬಂದರುಗಳಲ್ಲಿ ಈಗಾಗಲೇ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ದಿನಪೂರ್ತಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಆಗ್ಗಿಂದಾಗೆ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಲ್ಪೆ ಬಂದರಿಗೆ ಪ್ರತಿದಿನ ೮ರಿಂದ ೧೦ ಸಾವಿರ ಜನ ಬಂದು ಹೋಗುತ್ತಿರುತ್ತಾರೆ. ಅವುಗಳಲ್ಲಿ ಸ್ಥಳೀಯರು, ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬಂದು ಹೋಗುವವರ ಸಂಖ್ಯೆಯು ಹೆಚ್ಚಿದ್ದು, ಮೀನುಗಾರಿಕಾ ಚಟುವಟಿಕೆಗಳಲ್ಲಿ ಭಾಗವಹಿಸುವವರ ನೋಂದಣಿ ಸೇರಿದಂತೆ ನಿಯಂತ್ರಣಕ್ಕೆ ವಿವಿಧ ಯೋಜನೆಗಳನ್ನು ರೂಪಿಸಬೇಕು ಎಂದು ಕರಾವಳಿ ಕಾವಲು ಪಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ನೋಂದಣಿಯಾಗದಿರುವ ಪಾತಿ ದೋಣಿಗಳನ್ನು ಮುಂದಿನ ಮೂರು ತಿಂಗಳ ಒಳಗಾಗಿ ನೋಂದಣಿ ಮಾಡಿ ಮುಗಿಸಬೇಕು ಎಂದ ಅವರು, ಮೀನುಗಾರಿಕೆಗೆ ತೆರಳುವ ವಿವಿಧ ರೀತಿಯ ಬೋಟ್‌ಗಳು ಸರಕಾರದ ಸೂಚನೆಯನ್ವಯ ನಿಗದಿಪಡಿಸಿರುವ ಕಲರ್ ಕೋಡಿಂಗ್‌ಗಳನ್ನು ತಪ್ಪದೇ ಪಾಲಿಸಬೇಕು ಎಂದರು. ಹೊರ ಜಿಲ್ಲೆಗಳಿಂದ ಅನಧಿಕೃತವಾಗಿ ಮೀನುಗಾರಿಕೆ ಚಟುವಟಿಕೆ ನಡೆಸುವ ದೋಣಿ ಗಳಿಗೆ ದಂಡ ವಿಧಿಸಬೇಕು. ದೋಣಿಗಳಿಗೆ ಚೀನಾ ನಿರ್ಮಿತ ಟ್ರೇಸಿಂಗ್ ಡಿವೈಸ್‌ಗಳನ್ನು ಅಳವಡಿಸಿದ್ದು, ಅವುಗಳು ಬಂದರು ಕಡೆ ಬರುವಾಗ ಅವುಗಳನ್ನು ಗುರುತಿಸಲು ಗೊಂದಲಗಳು ಉಂಟಾಗುತ್ತಿವೆ. ಅಂತಹ ಸಾಧನಗಳ ತಾಂತ್ರಿಕೆಯನ್ನು ಸರಿಪಡಿಸಬೇಕು ಎಂದರು. ಈಗಾಗಲೇ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದೆ ಎಂದ ಅವರು, ಪ್ರತಿ ಜಿಲ್ಲೆಯಲ್ಲೂ ಗೋ-ಶಾಲೆಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸುವುದರೊಂದಿಗೆ ಸುಸಜ್ಜಿತ ಗೋಶಾಲೆಗಳನ್ನು ಪ್ರಾರಂಭಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಮುಖ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಕರಾವಳಿ ಕಾವಲು ಪೊಲೀಸ್ ಘಟಕದ ಪೊಲೀಸ್ ಅಧೀಕ್ಷಕ ಚೇತನ್ ಆರ್. ಮತ್ತಿತರರು ಉಪಸ್ಥಿತರಿದ್ದರು.