ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವುಗೊಳಿಸಲು  ಡಿಸಿ ಆದೇಶ


ಬಳ್ಳಾರಿ,ಮಾ.17: ಕರ್ನಾಟಕ ವಿಧಾನಸಭೆ ಚುನಾವಣೆ-2023 ಪ್ರಯುಕ್ತ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್‍ಗಳು ಮತ್ತು ಬಾವುಟಗಳನ್ನು ಆಳವಡಿಸಿದ್ದಲ್ಲಿ ತೆರವುಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.
ಸಾರ್ವಜನಿಕ ಸ್ಥಳಗಳು ಮತ್ತು ತೆರೆದ ಸ್ಥಳಗಳು (ಸಾರ್ವಜನಿಕರ ಪ್ರವೇಶವಿರುವ ಅಥವಾ ಆಶ್ರಯಿಸುವ ಹಕ್ಕು ಇರುವ ಅಥವಾ ಹಾದು ಹೋಗಲು ಹಕ್ಕು ಇರುವ ರಸ್ತೆ, ಬೀದಿ, ರಸ್ತೆ ಮಾರ್ಗ, ನಿಲುಗಡೆ ಪ್ರದೇಶಗಳು) ಖಾಸಗಿ ಸ್ಥಳ ಅಥವಾ ಸ್ಮಾರಕ, ಪ್ರತಿಮೆ, ಪೋಸ್ಟ್, ಗೋಡೆ ಬರಹ, ಮರಗಳಲ್ಲಿ ವ್ಯಕ್ತಿಗಳಿಗೆ ಕಾಣಿಸುವ ರೀತಿ ಜಾಹಿರಾತು ಪ್ರದರ್ಶಿಸುವುದು, ಜಾಹೀರಾತುಗಳನ್ನು ಮತ್ತು ಹೋರ್ಡಿಂಗ್ಸ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ಅಥವಾ ಮತ್ತೊಬ್ಬ ವ್ಯಕ್ತಿ ಮೂಲಕ ಯಾವುದೇ ಜಾಹಿರಾತುಗಳನ್ನು ಪ್ರದರ್ಶಿಸುವುದಾಗಲೀ, ಜಾಹೀರಾತುಗಳನ್ನು ನಿಲ್ಲಿಸುವುದಾಗಲೀ, ಬರಹಗಳ ಮೂಲಕವಾಗಲೀ ಪ್ರಕಟಿಸಿದಲ್ಲಿ 6 ತಿಂಗಳ ಜೈಲು ಶಿಕ್ಷೆ ಒಂದು ಸಾವಿರದವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ 2023ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣಾ ಪ್ರಕ್ರಿಯೆಯು ಜಾರಿಯಲ್ಲಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ ಚುನಾವಣಾ ಪ್ರಚಾರಕ್ಕಾಗಿ ನಡೆಸುತ್ತಿರುವ ಸಭೆ, ಯಾತ್ರೆ, ಕಾರ್ಯಕ್ರಮಗಳಲ್ಲಿ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್‍ಗಳು ಮತ್ತು ಬಾವುಟಗಳನ್ನು ಅನಧಿಕೃತವಾಗಿ ಅಳವಡಿಸುತ್ತಿರುವುದು ಕಂಡುಬಂದಿರುತ್ತದೆ. ಇನ್ನು ಮುಂದೆ ನಡೆಯುವ ರಾಜಕೀಯ ಪಕ್ಷಗಳ ಸಭೆ, ಪ್ರಚಾರ ಕಾರ್ಯಕ್ರಮಗಳಲ್ಲಿ ಅಳವಡಿಸುವ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್‍ಗಳು ಮತ್ತು ಬಾವುಟಗಳ ಕುರಿತು ಪರಿಶೀಲಿಸಿ ಕ್ರಮವಹಿಸಲು ಸೂಚಿಸಲಾಗಿದೆ.
ಪ್ಲಾಸ್ಟಿಕ್ ಬ್ಯಾನರ್‍ಗಳು, ಪ್ಲಾಸ್ಟಿಕ್ ಬಂಟಿಂಗ್ಸ್, ಧ್ವಜ, ಡೈನಿಂಗ್ ಟೇಬಲ್‍ನಲ್ಲಿ ಹರಡಲು ಬಳಸುವ ಹಾಳೆ, ಸ್ಟ್ರಾಗಳು, ಥರ್ಮೋಕೋಲ್‍ಗಳು, ಇಯರ್ ಬಡ್ಸ್, ಸ್ಟಿಕ್ಕರ್, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್ಸ್, ಐಸ್‍ಕ್ರೀಮ್ ಸ್ಟಿಕ್, ಲೋಟ ಚಾಕು, ಕತ್ತರಿ, ಪ್ಯಾಕಿಂಗ್ ಫಿಲ್ಡ್ ಆಮಂತ್ರಣ ಪತ್ರ, ಸಿಗರೇಟ್ ಪ್ಯಾಕ್, ಪಿಎಸಿ ಬ್ಯಾನರ್‍ಗಳು ಮೈಕ್ರೋ ಮಣಿ ಮತ್ತು ಪಾಲಿಸ್ಟೆರಿನ್‍ಗಳನ್ನೊಳಗೊಂಡಂತೆ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಸೂಚಿಸಿದ್ದಾರೆ.