ಅನಧಿಕೃತ ಬಿತ್ತನೆ ಬೀಜ ಜಪ್ತು

ಹಾವೇರಿ,ಜೂ 10: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡ್ಡದಆನ್ವೇರಿ ಗ್ರಾಮದಲ್ಲಿ ಅನಧಿಕೃತವಾಗಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದ್ದ ಗೋಡೌನ್ ಮೇಲೆ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು, ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು 2ಕೋಟಿ ರೂ.ಗಳ ಮೌಲ್ಯದ 68 ಟನ್‍ಗಿಂತಲೂ ಅಧಿಕ ಹೈಬ್ರೀಡ್ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಿದ್ದಾರೆ.
ರೈತರು ಬಿತ್ತನೆಗೆ ಭೂಮಿ ಸಿದ್ದ ಮಾಡಿಕೊಂಡು ಬಿತ್ತನೆ ಬೀಜ ಖರೀದಿ ಮಾಡಿಟ್ಟುಕೊಳ್ಳಲು ಮುಂದಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಅನಧಿಕೃತ ಬಿತ್ತನೆ ಬೀಜಗಳ ಮಾರಾಟ ಭಾರಿ ಸದ್ದು ಮಾಡಿತ್ತು. ಇದರ ಖಚಿತ ಮಾಹಿತಿ ಮೇರೆಗೆ ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ, ನಾರಾಯಣಗೌಡ ಹಾಗೂ ರಾಣೆಬೆನ್ನೂರಿನ ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ.ಗೌಡಪ್ಪನವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಗೋಡೌನ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬಿತ್ತನೆ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಅಕ್ರಮವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಅನಧಿಕೃತ ಬಿತ್ತನೆ ಬೀಜ ಮಾರಾಟ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಜಿಲ್ಲೆಯ ಹಲವೆಡೆ ಕಳೆದ ಕೆಲವು ದಿನಗಳ ಹಿಂದೆ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ. ಇನ್ನೊಂದು ಮಳೆ ಬಿದ್ದ ಕೂಡಲೇ ಬಿತ್ತನೆ ಕಾರ್ಯ ಮಾಡಬೇಕು ಎಂದು ಜಿಲ್ಲೆಯ ಬಹುತೇಕ ಕಡೆಗಳಲ್ಲಿನ ರೈತರು ಬಿತ್ತನೆಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ದಂಧೆಕೋರರು ರೈತರಿಗೆ ಅನಧಿಕೃತ ಬಿತ್ತನೆ ಬೀಜಗಳನ್ನು ಮಾರಾಟ ಮಾಡಿ ರೈತರಿಗೆ ಉತ್ತಮ ಬೆಳೆ ಮತ್ತು ಫಸಲು ಬಾರದೆ ಹಾನಿಯಾಗುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಕೃಷಿ ಇಲಾಖೆಯು ಅಂತಹ ದಂಧೆಕೋರರನ್ನು ಬಯಲಿಗೆ ಎಳೆಯುವ ಕಾರ್ಯಕ್ಕೆ ಮುಂದಾಗಿದೆ.