
ಬೆಂಗಳೂರು,ಆ.8- ನ್ಯಾಯಾಲಯದ ನಿರ್ದೇಶನದಂತೆ ಬೆಂಗಳೂರು ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅನಧಿಕೃತ ಫ್ಲೆಕ್ಸ್ ನಿರ್ಬಂಧ ಹೇರಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅನಧಿಕೃತ ಪ್ಲೆಕ್ಸ್ ತೆರವಿಗೆ ನ್ಯಾಯಾಲಯ 3 ವಾರ ನೀಡಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಎಲ್ಲ ಅನಧಿಕೃತ ಫ್ಲೆಕ್ಸ್ ಗಳನ್ನು ನಿಷೇಧಿಸಲಾಗುವುದು. ಈ ವಿಚಾರವಾಗಿ ಸಚಿವರು ಹಾಗೂ ನಾಯಕರಿಗೆ ಮನವಿ ಮಾಡಿದ್ದೇನೆ. ಫ್ಲೆಕ್ಸ್ ನಿಷೇಧ ಕುರಿತು ಮುಂದಿನ ದಿನಗಳಲ್ಲಿ ನೀತಿ ರೂಪಿಸಲಾಗುವುದು ಎಂದಿದ್ದಾರೆ.
ಅನಧಿಕೃತ ಫ್ಲೆಕ್ಸ್ ಹಾಕಿದವರು ಯಾರೇ ಆದರೂ ಪಾಲಿಕೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿ, ಒಂದು ಫ್ಲೆಕ್ಸ್ ಗೆ ತಲಾ 50 ಸಾವಿರ ದಂಡ ವಿಧಿಸಲಿದ್ದಾರೆ” ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಜನ್ಮದಿನ, ಶ್ರದ್ಧಾಂಜಲಿ, ಶುಭ ಸಂದೇಶ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಚಾರ ಸೇರಿದಂತೆ ಯಾವುದೇ ಅನಧಿಕೃತ ಫ್ಲೆಕ್ಸ್ ಹಾಕುವಂತಿಲ್ಲ. ಇದಕ್ಕೆ ಎಲ್ಲಾ ಪಕ್ಷಗಳು ಹಾಗೂ ನಾಗರೀಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಸರ್ಕಾರದಿಂದ ಫ್ಲೆಕ್ಸ್ ಹಾಕುವುದಿದ್ದರೆ, ಸಮಯ, ಅಳತೆ, ಸ್ಥಳ ನಿಗದಿ ಮಾಡಿ ಅನುಮತಿ ನೀಡಲಾಗುವುದು. ಇದಕ್ಕೂ ನೀತಿ ರೂಪಿಸಲಾಗುತ್ತಿದೆ. ಈಗಾಗಲೇ ನಗರದಲ್ಲಿ 59 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. 134 ದೂರುಗಳು ಬಂದಿದ್ದು, 40 ಎಫ್ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ
“ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ, ಮೇಲ್ಸೇತುವೆ ಸೇರಿದಂತೆ ಪರಿಹಾರ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಇದಕ್ಕಾಗಿ ಬಿಡಿಎ ಹಾಗೂ ಬಿಬಿಎಂಪಿ ಮೂಲಕ ಎಕ್ಸ್ ಪ್ರೆಷನ್ ಆಫ್ ಇಂಟರೆಸ್ಟ್ ಅನ್ನು ಕರೆಯಲಾಗಿತ್ತು. ಅದರ ಅವಧಿ ನಿನ್ನೆಗೆ ಮುಕ್ತಾಯಗೊಂಡಿತ್ತು. ಆದರೆ ಇನ್ನು ಹೆಚ್ಚಿನ ಸಂಸ್ಥೆಗಳು ಇದರಲ್ಲಿ ಭಾಗವಹಿಸಲು ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಈ ಅವಧಿಯನ್ನು ಒಂದು ವಾರ ಅಂದರೆ ಅ.17 ರವರೆಗೆ ವಿಸ್ತರಿಸಲಾಗಿದೆ. ಗ್ಲೋಬಲ್ ಟೆಂಡರ್ ಕರೆಯಲಾಗಿದೆ ಎಂದಿದ್ದಾರೆ.
ಮೆಟ್ರೋ ಸುರಂಗದಲ್ಲಿ ಕೇವಲ ಒಂದು ಮಾರ್ಗದಲ್ಲಿ ಮಾತ್ರ ಚಲಿಸಬಹುದಾಗಿದೆ. ಹೀಗಾಗಿ ಟನಲ್ ರಸ್ತೆಯಲ್ಲಿ ದ್ವಿಮುಖ ಮಾರ್ಗ ಇರಬೇಕು ಎಂದು ಸಲಹೆ ನೀಡಿದ್ದೇನೆ. ಅನೇಕ ಸಂಸ್ಥೆಗಳು ವಿನ್ಯಾಸ, ಆರ್ಥಿಕ ಸಾಮರ್ಥ್ಯದ ಬಗ್ಗೆ ಚರ್ಚೆ ಮಾಡಲು ಮುಂದೆ ಬಂದಿವೆ ಎಂದರು.
ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಂಗಳೂರಿನ ಸಂಚಾರಿ ದಟ್ಟಣೆ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬ ವಿಚಾರವಾಗಿ ನಾವು ಅನೇಕ ಸುತ್ತು ಚರ್ಚೆ ಮಾಡಿದ್ದೇವೆ. ಸಾರ್ವಜನಿಕರಿಂದ 70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ಇನ್ನು ಕೆಲವರ ಜತೆ ಚರ್ಚೆ ಮಾಡಿ ಸಲಹೆ ಪಡೆಯಲಿದ್ದೇನೆ ಎಂದು ತಿಳಿಸಿದ್ದಾರೆ.
ಶಾಲಾ ಮಕ್ಕಳಿಂದ, ಹಿರಿಯ ನಾಗರೀಕರು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದವರಿಂದ ಸಲಹೆಗಳನ್ನು ಪಡೆದಿದ್ದು, ಇವನ್ನು ನಾಲ್ಕೈದು ವಿಭಾಗಗಳಲ್ಲಿ ಪರಿಶೀಲನೆ ಮಾಡಿ ಸಾರಾಂಶ ನೀಡುವ ಜವಾಬ್ದಾರಿಯನ್ನು ಕೆಲವು ಸಂಸ್ಥೆಗಳಿಗೆ ವಹಿಸಲಾಗಿದೆ ಎಂದರು.
ದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ನೆಲಮಂಗಲ, ಬಳ್ಳಾರಿ, ಕೋಲಾರ, ಹೊಸೂರು, ಮೈಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಗಳು ಸೇರುವ ಹಾಗೂ ಬೆಂಗಳೂರು ನಗರದ ರಸ್ತೆಗಳು ಸಂಚಾರದಟ್ಟಣೆಗೆ ಕಾರಣವಾಗಿವೆ. ಇದರ ಪರಿಹಾರಕ್ಕೆ ಕೇಂದ್ರ ಸರ್ಕಾರ ಕೂಡ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದೇನೆ. ಯೋಜನೆ ರೂಪಿಸಿಕೊಂಡು ಬನ್ನಿ ಎಂದು ಅವರು ತಿಳಿಸಿದ್ದಾರೆ.”