ಅನಧಿಕೃತ ಪಿಸ್ತೂಲ್‍ ಹೊಂದಿದ್ದ ಐವರ ಬಂಧನ

ಕಲಬುರಗಿ.ಮಾ.25:ಅನಧಿಕೃತವಾಗಿ ಪಿಸ್ತೂಲ್‍ಗಳನ್ನು ಹೊಂದಿದ್ದ ಐವರು ಆರೋಪಿಗಳನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಹಾಗರಗಾ ರಸ್ತೆಯಲ್ಲಿನ ಫಿರ್ದೋಸ್ ಕಾಲೋನಿ ನಿವಾಸಿ ಅಬ್ಬು ಮೌಲಾನಾ ಅಲಿಯಾಸ್ ಅಬು ಬಾಕರ್ ತಂದೆ ಅಬ್ದುಲ್ ರೆಹಮಾನ್ ಖಾಜಿ (36), ಭೀಮಳ್ಳಿ ಗ್ರಾಮದ ನಿವಾಸಿ ಸದ್ದಾಮ್ ಅಲಿಯಾಸ್ ಮೊಹ್ಮದ್ ಹಸನ್ ತಂದೆ ಅಲ್ಲಾ ಪಟೇಲ್ ಇಟಗಿ (24), ಹೈದ್ರಾಬಾದ್‍ನ ಮುರ್ಶಿದಾಬಾದ್ ಬಳಿ ಇರುವ ಪೋಲಕಪುರ ನಿವಾಸಿಗಳಾದ ಅಬ್ದುಲ್ ಮನ್ನಾನ್ ತಂದೆ ಮೊಹ್ಮದ್ ಗೌಸಿಯುದ್ದೀನ್ (26) ಮತ್ತು ಇನಾಯತ್ ಅಲಿ ತಂದೆ ಸಲ್ಲು ತಂದೆ ಮೊಹ್ಮದ್ ಅಲಿ (25) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಎರಡು ಪಿಸ್ತೂಲ್‍ಗಳನ್ನು ಹಾಗೂ ಎರಡು ಜೀವಂತ ಗುಂಡುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಪೋಲಿಸರ ಕಾರ್ಯಾಚರಣೆ ವೇಳೆಯಲ್ಲಿ ನಗರದ ಹೊರವಲಯದಲ್ಲಿನ ಮಾಲಗತ್ತಿ ಕ್ರಾಸ್ ಪ್ರದೇಶದ ನಿವಾಸಿ ಸಲ್ಮಾನ್ ಅಲಿಯಾಸ್ ಸಲ್ಲು ಪರಾರಿಯಾಗಿದ್ದಾನೆ.
ಖಚಿತ ಭಾತ್ಮಿ ಮೇರೆಗೆ ಎಂ.ಬಿ. ನಗರ ಠಾಣೆಯ ಪೋಲಿಸರು ಎಂ.ಬಿ. ನಗರ ವ್ಯಾಪ್ತಿಯಲ್ಲಿನ ಸೌಭಾಗ್ಯ ಕಲ್ಯಾಣ ಮಂಟಪದ ಬಳಿ ಕಾರ್ಯಾಚರಣೆ ಮಾಡಿ ಐವರು ಆರೋಪಿಗಳನ್ನು ಬಂಧಿಸಿದರು. ಬಂಧಿತರಲ್ಲಿ ಆರೋಪಿಗಳಾದ ಫಿರ್ದೋಸ್ ಕಾಲೋನಿಯ ಅಬ್ಬು ಮೌಲಾನಾ ಅಲಿಯಾಸ್ ಅಬು ಬಾಕರ್ ತಂದೆ ಅಬ್ದುಲ್ ರೆಹಮಾನ್ ಖಾಜಿ ವಿರುದ್ಧ 2019ರಲ್ಲಿ ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಹೈದ್ರಾಬಾದ್‍ನ ಪೋಲಕಪುರದ ನಿವಾಸಿ ಮೊಹ್ಮದ್ ಆಸಿಫ್ ವಿರುದ್ಧ ತೆಲಂಗಾಣದ ಪಥಂಚೋರ್ ಪೋಲಿಸ್ ಠಾಣೆಯಲ್ಲಿ ಕಳೆದ 2019ರಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಬಂಧಿತರು ಹೈದ್ರಾಬಾದ್‍ನಲ್ಲಿ ಪಿಸ್ತೂಲ್ ಖರೀದಿಸಿದ್ದಾಗಿ ಹೇಳಿದ್ದು, ಈ ಕುರಿತು ಎಂ.ಬಿ. ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.