ಅನಧಿಕೃತ ಗರ್ಭಪಾತ: ಇಬ್ಬರು ನರ್ಸ್ ಪೊಲೀಸ್ ಕಸ್ಟಡಿಗೆ: ಶಶಿಧರ ಕೋಸಂಬೆಯಿಂದ ಸ್ಥಳ ಪರಿಶೀಲನೆಸಿಐಡಿ ತನಿಖೆಗೆ ಒಪ್ಪಿಸಲು ಸರ್ಕಾರಕ್ಕೆ ಪತ್ರ

ಮುದ್ದೇಬಿಹಾಳ: ಫೆ.16:ಮಂಡ್ಯ ಜಿಲ್ಲೆಯ ಆಲೇಮನೆಯಲ್ಲಿ ಭ್ರೂಣಹತ್ಯೆಯ ತನಿಖಾ ವರದಿ ಸರ್ಕಾರದ ಕೈಸೇರುವ ಮೊದಲೇ ಅಂಥದ್ದೇ ಘಟನೆ ಮುದ್ದೇಬಿಹಾಳದಲ್ಲಿ ಬೆಳಕಿಗೆ ಬಂದಿದೆ. ಇಂಥ ಕರಾಳ ದಂಧೆಗೆ ಬ್ರೇಕ್ ಹಾಕಲು, ಸಮಾಜದ ಅನಿಷ್ಠ ಪದ್ಧತಿಗೆ ತಿಲಾಂಜಲಿ ಹಾಡಲು ಕಠಿಣ ಕ್ರಮ ಕೈಕೊಳ್ಳುವಂತೆ ಮತ್ತು ಮುದ್ದೇಬಿಹಾಳದಲ್ಲಿ ಬೆಳಕಿಗೆ ಬಂದಿರುವ ಪ್ರಕರಣದ ಅಮೂಲಾಗ್ರ ತನಿಖೆ ನಡೆಸಲು ಇದನ್ನು ಸಿಐಡಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ಬುಧವಾರ ಹುಲ್ಲೂರ ಗ್ರಾಮದಲ್ಲಿರುವ, ಸಧ್ಯ ಸೇವೆಯಿಂದ ಅಮಾನತ್ತುಗೊಂಡು ನ್ಯಾಯಾಂಗ ವಶದಲ್ಲಿರುವ, ತಾಲೂಕು ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಣಿ ಸಾವಿತ್ರಿ ಭಜಂತ್ರಿ ಅವರ ಮನೆಗೆ ಭೇಟಿ ನೀಡಿ, ಮನೆಯ ಮೇಲೆ ಸಿಕ್ಕ ವೈದ್ಯಕೀಯ ಸಾಮಗ್ರಿಗಳ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸ್ತ್ರೀ ಸಮಾನತೆಗೆ ಹೋರಾಟ ಮಾಡಿರುವ ಬಸವಣ್ಣನ ಈ ನಾಡಿನಲ್ಲಿ ಭ್ರೂಣ ಹತ್ಯೆಯಂಥ ಕರಾಳ ದಂಧೆ ನಡೆಯುತ್ತಿರುವುದು ತಲೆತಗ್ಗಿಸುವಂಥದ್ದು. ಮುದ್ದೇಬಿಹಾಳದಲ್ಲಿ ವರದಿಯಾದ ಪ್ರಕರಣ ಕುರಿತು ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದ್ದು ಈ ಕುರಿತು ವರದಿ ತರಿಸಿಕೊಳ್ಳುವಂತೆ ಆಯೋಗದ ಆಯುಕ್ತರಿಗೆ ಪತ್ರ ಬರೆದು ಸೂಚಿಸುತ್ತೇನೆ. ಅಧಿಕಾರಿಗಳ ವರದಿ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿರಬೇಕಾದ ಉಚಿತ ಪೂರೈಕೆಯ ವಸ್ತುಗಳು ನರ್ಸ್ ಒಬ್ಬರ ಮನೆಯಲ್ಲಿ ಸಿಗುತ್ತಿರುವುದು ಆಘಾತಕಾರಿ ಬೆಳವಣಿಗೆ. ಈ ಥರದ ಕೆಲಸ ಕಾರ್ಯಗಳಿಗೆ ತಿಲಾಂಜಲಿ ಹಾಡುವುದು ಅತ್ಯಂತ ಅವಶ್ಯವಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸುವ ಕೆಲಸ ಆಗಬೇಕು. ಆಯೋಗದಿಂದ ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಮಂಡ್ಯ ಪ್ರಕರಣ ಈಗಾಗಲೇ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಅವರು ವರದಿ ಸಲ್ಲಿಸಲು ಸಿದ್ದತೆ ಮಾಡಿಕೊಂಡಿರುವ ಬೆನ್ನಲ್ಲೆ ಇಲ್ಲಿನ ಇಬ್ಬರು ನರ್ಸಗಳು ಜೀವ ತೆಗೆಯುವ ಕೆಲಸ ಮಾಡುತ್ತಿರುವುದು ಅಕ್ಷಮ್ಯ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದರೆ ಇಂಥ ಕಾನೂನು ಬಾಹಿರ, ಅನಧಿಕೃತ ಗರ್ಭಪಾತ ತಡೆಗಟ್ಟಬಹುದು. ಈಗಿನ ವ್ಯವಸ್ಥೆಯಲ್ಲಿ ತಪ್ಪು ಮಾಡಿದರೆ ನಡೆಯುತ್ತದೆ ಎನ್ನುವ ಮನೋಭಾವ ಬಂದಿದ್ದು ಇದಕ್ಕೆ ನಿಯಂತ್ರಣ ಹಾಕಬೇಕಾದ ಅನಿವಾರ್ಯತೆ ಇದೆ. ಸಂಬಂಧಪಟ್ಟವರು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಧ್ಯ 1000 ಗಂಡು ಮಕ್ಕಳಿಗೆ 945 ಹೆಣ್ಣು ಮಕ್ಕಳ ಲಿಂಗಾನುಪಾತ ಕುಸಿತ ಕಾಣುತ್ತಿದೆ. ಕೆಳಮಟ್ಟದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಯಾರು ಕಾನೂನುಬಾಹಿರವಾಗಿ ಗರ್ಭಪಾತ ನಡೆಸುತ್ತಿದ್ದಾರೆ ಅನ್ನೋದು ಗೊತ್ತಿರುತ್ತದೆ. ಕೂಡಲೇ ಆರೋಗ್ಯ ಇಲಾಖೆಯವರು ಕೆಳಹಂತದವರಿಂದ ಅನಧಿಕೃತ ಗರ್ಭಪಾತದಲ್ಲಿ ತೊಡಗಿದವರನ್ನು ಪತ್ತೇ ಹಚ್ಚಿ ಕಾನೂನು ಕ್ರಮ ಕೈಕೊಳ್ಳಲು ಮುಂದಾಗಬೇಕು. ಆರೋಗ್ಯ ಇಲಾಖೆಯವರ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದ್ದು ಈ ಬಗ್ಗೆ ಈಗಾಗಲೇ ಜಿಲ್ಲೆಯಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಲಾಗಿದೆ. ಭ್ರೂಣಹತ್ಯೆ, ಕಾನೂನುಬಾಹಿರ ಗರ್ಭಪಾತ ತಡೆಗಟ್ಟಲು ನಾಲ್ಕು ತಂಡ ರಚಿಸಿ ತನಿಖೆ ನಡೆಸುವಂತೆ ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಸಿಡಿಪಿಓ ಶಿವಮೂರ್ತಿ ಕುಂಬಾರ, ಎಎಸೈ ಕೆ.ಎಸ್.ಅಸ್ಕಿ, ಹೆಡ್‍ಕಾನ್ಸಟೇಬಲ್ ಎಸ್.ಜಿ.ಬನ್ನೆಟ್ಟಿ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಭಜಂತ್ರಿಯವರ ಮನೆಯ ಮಾಳಿಗೆ ಮೇಲೆ ಇರಿಸಿದ್ದ ಸರ್ಕಾರಿ ಆಸ್ಪತ್ರೆಯಲ್ಲಿರಬೇಕಿದ್ದ ಉಚಿತ ಪೂರೈಕೆಯ ವೈದ್ಯಕೀಯ ಸಾಮಗ್ರಿಗಳನ್ನು ಶಶಿಧರ ಅವರು ಪರಿಶೀಲಿಸಿದರು.

ಮುದ್ದೇಬಿಹಾಳದಲ್ಲಿ ಪತ್ತೇ ಆಗಿರುವ ಕಾನೂನುಬಾಹಿರ ಗರ್ಭಪಾತ ಪ್ರಕರಣದಲ್ಲಿ ವೈಫಲ್ಯ ಕಂಡು ಬಂದಿರುವ ಸಂಬಂಧಿಸಿದ ಆಶಾ ಕಾರ್ಯಕರ್ತೆಯರಿಗೆ ಕಾರಣ ಕೇಳಿ ನೋಟಿಸ್ ನೀಡಲು ಮತ್ತು ತಪ್ಪಿತಸ್ತರು ಕಂಡುಬಂದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ.
-ಶಶಿಧರ ಕೋಸಂಬೆ, ಸದಸ್ಯರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು.


ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯ ನರ್ಸ್ ಸಾವಿತ್ರಿ ಭಜಂತ್ರಿ ಅವರು ಇಂಡಿ ತಾಲೂಕಿನ ಹಲಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಸಾವಿತ್ರಿ ಅರಕೇರಿ ಅವರೊಂದಿಗೆ ಸೇರಿಕೊಂಡು ಸೂಕ್ತ ಪ್ರಾಧಿಕಾರದ ಅನಮತಿ ಇಲ್ಲದೆ ಹುಲ್ಲೂರಿನ ತನ್ನ ಮನೆಯಲ್ಲಿಯೇ ಕಾನೂನುಬಾಹಿರವಾಗಿ ಗರ್ಭಪಾತ ಮಾಡುತ್ತಿದ್ದು ಇವರ ವಿರುದ್ಧ ಐಪಿಸಿ ಕಲಂ 312, 511, 420, ಕಲಂ 23 (3) (2) ಪ್ರೀಕನ್ಸೆಪ್ಶನ್ ಆ್ಯಂಡ್ ಪ್ರೇನಾಟಲ್ ಡೈಗ್ನೋಸ್ಟಿಕ್ ಟೆಕ್ನಿಕ್ಸ್ (ಪ್ರೊಹಿಬಿಷನ್ ಆಫ್ ಸೆಕ್ಸ್ ಸೆಲೆಕ್ಷನ್) -1994 ಕಾಯ್ದೆ ಮತ್ತು ಕಲಂ 19(1) ಕೆ.ಪಿ.ಎಂ.ಇ.ಆ್ಯಕ್ಟ್ -2007 ಅಡಿ ಕಾನೂನು ಕ್ರಮ ಕೈಕೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ ಅವರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಫೆ.11 ರಂದು ರಾತ್ರಿ ಪ್ರಕರಣ ದಾಖಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಇಬ್ಬರೂ ನರ್ಸ್‍ಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಅವರಿಬ್ಬರನ್ನೂ ಸಧ್ಯ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಬುಧವಾರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇವರಿಬ್ಬರನ್ನೂ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.