ಅನಧಿಕೃತ ಕುಡಿಯುವ ನೀರಿನ ಘಟಕಗಳ ವಿರುದ್ಧ ಪ್ರತಿಭಟನೆ

ಕಲಬುರಗಿ,ಜೂ.12: ಅನಧಿಕೃತ ಕುಡಿಯುವ ನೀರಿನ ಘಟಕಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಕಚೇರಿ ಮುಂದೆ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾವಲು ಪಡೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಪ್ರತಿಭಟನೆಕಾರರು ನಂತರ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಅನಧಿಕೃತ ಕುಡಿಯುವ ನೀರಿನ ಘಟಕಗಳ ಮಾಲಿಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಆ ನೀರಿನ ಘಟಕಗಳ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.
ನಗರದ ಸೂಪರ್ ಮಾರ್ಕೆಟ್‍ನ ಪಂಜಾಬ್ ಬೂಟ್ ಹೌಸ್ ಬಳಿ ಇತ್ತೀಚೆಗೆ ಒಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸಲಾಗಿದೆ. ಅದಕ್ಕೆ ಯಾವುದೇ ರೀತಿಯಲ್ಲಿ ಅನುಮತಿ ಪಡೆಯಲಾಗಿಲ್ಲ. ಐಎಸ್‍ಐ ಮಾರ್ಕ್ ಸಹ ಇಲ್ಲ. ಬೋರ್‍ವೆಲ್‍ಗಳ ನೀರನ್ನು ಚೀನಾ ಬಜಾರ್‍ದಲ್ಲಿನ ಖರೀದಿ ಮಾಡಿದ ಕ್ಯಾನ್‍ಗಳಲ್ಲಿ ತುಂಬಿ, ಒಂದು ಕ್ಯಾನ್‍ಗೆ ಹತ್ತು ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ. ನಾವು ಕ್ಯಾನ್ ಪರಿಶೀಲಿಸಿದಾಗ ಒಂದು ಕ್ಯಾನ್‍ನಲ್ಲಿ ಸಣ್ಣ ಮಕ್ಕಳು ತಿನ್ನುವ ಚಿಂಗಮ್‍ಗಳು ದೊರಕಿವೆ. ಎರಡು ಚಿಂಗಮ್‍ಗಳು ನೀರಿನ ಕ್ಯಾನ್‍ನಲ್ಲಿ ಪತ್ತೆಯಾಗಿವೆ. ಕೂಡಲೇ ಆ ಅನಧಿಕೃತ ಕುಡಿಯುವ ನೀರಿನ ಘಟಕದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ನಗರದಲ್ಲಿನ ಅನೇಕ ಬಡಾವಣೆಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿ ಕಲುಷಿತವಾದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಆ ಕುರಿತು ಮಹಾನಗರ ಪಾಲಿಕೆ ಇಲ್ಲವೇ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರವು ಸಹ ಗಮನಿಸುತ್ತಿಲ್ಲ. ಹೀಗಾಗಿ ಅನೇಕ ಅನಧಿಕೃತ ಕುಡಿಯುವ ನೀರಿನ ಘಟಕಗಳು ಕಾರ್ಯಾರಂಭಗೊಂಡಿದ್ದು, ಆ ಘಟಕಗಳು ಕಲುಷಿತ ನೀರು ಪೂರೈಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕೂಡಲೇ ನಗರದಲ್ಲಿನ ಎಲ್ಲ ಕುಡಿಯುವ ನೀರಿನ ಘಟಕಗಳ ಸಕ್ರಮದ ಕುರಿತು ಪರಿಶೀಲಿಸಬೇಕು. ಸರ್ಕಾರದಿಂದ ಅನುಮತಿ ಪಡೆದಿರುವ ಕುರಿತು, ವಿದ್ಯುತ್ ಸಂಪರ್ಕದ ಅನುಮತಿಯನ್ನು ಪಡೆದಿರುವ ಕುರಿತು ಪರುಶೀಲನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರದ ಮಾನ್ಯತೆ ಪಡೆಯದೇ ಒಂದು ಬೋರವೆಲ್ ಹೊಡೆಸುವ ಮೂಲಕ ಶೆಟರ್‍ನಲ್ಲಿಯೇ ಕಲುಷಿತವಾದ 20 ಲೀಟರ್ ಕ್ಯಾನ್‍ಗಳಲ್ಲಿ ಐದರಿಂದ ಹತ್ತು ರೂ.ಗಳನ್ನು ಪಡೆದು ಕಲುಷಿತ ನೀರು ಪೂರೈಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಕೂಡಲೇ ಅಂತಹ ಘಟಕಗಳನ್ನು ನಿಷೇಧಿಸಿ, ತಪ್ಪಿತಸ್ಥ ಮಾಲಿಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ರಾಜ್ಯ ವಕ್ತಾರ ಹಾಗೂ ಜಿಲ್ಲಾ ಸಂಘಟನಾ ಉಸ್ತುವಾರಿ ಮಂಜುನಾಥ್ ನಾಲವಾರಕರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಗರಾಜ್ ಸ್ವಾದಿ, ರವಿ ವಾಲಿ, ಚರಣರಾಜ್ ರಾಠೋಡ್, ಅಮರದೀಪ್ ಕೊಳ್ಳೂರ್, ದೀಪಕ್ ಶಹಾಪೂರಕರ್, ವಿನೋದರಾಜ್ ರಾಠೊಡ್, ರಾಕೇಶ್ ಪಾಟೀಲ್, ಅರವಿಂದ್ ನಾಟೀಕಾರ್ ಮುಂತಾದವರು ಪಾಲ್ಗೊಂಡಿದ್ದರು.