ಅನಧಿಕೃತವಾಗಿ ಪಡಿತರ ಅಕ್ಕಿ ಸಾಗಣೆ

ಮರಿಯಮ್ಮನಹಳ್ಳಿ, ಅ.29: ಮರಿಯಮ್ಮನಹಳ್ಳಿಯ ರಾ.ಹೆ.50ರ ಪೆಟ್ರೋಲ್‍ಬಂಕ್ ಬಳಿ ಪಡಿತರ ಅಕ್ಕಿಯನ್ನು ಅನಧಿಕೃತವಾಗಿ ಸಾಗಿಸುತ್ತಿದ್ದ ವಾಹನವನ್ನು ಪಟ್ಟಣ ಠಾಣೆಯ ಪೊಲೀಸರು ಸರಕು ಸಮೇತ ವಾಹನವನ್ನು ಜಪ್ತಿ ಮಾಡಿದ್ದಾರೆ.
ಪಟ್ಟಣ ವ್ಯಾಪ್ತಿಯ ಪಡಿತರದಾರರಿಂದ ಹಣದ ಆಮಿಷ ತೋರಿಸಿ ಕಡಿಮೆ ಬೆಲೆಗೆ ಖರೀದಿಸಿ, ಸಂಗ್ರಹಿಸಿ ವಾಹನ ಸಂಖ್ಯೆ ಕೆಎ 34 ಬಿ 6356ರಲ್ಲಿ ತುಂಬಿಕೊಂಡು ಪಾಲಿ ಮತ್ತು ರೀಬ್ಯಾಗ್ ಮಾಡಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ ವಾಹನದಲ್ಲಿದ್ದ 4.83 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಾಹನ ಸಮೇತ ಜಪ್ತಿ ಮಾಡಲಾಗಿದೆ.
ಈ ಕೃತ್ಯದಲ್ಲಿ ಭಾಗಿಯಾದ ವಾಹನದ ಚಾಲಕ ಹಾಗೂ ಮಾಲೀಕ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಚನಾಳ್ ಗ್ರಾಮದ ಕರಿಬಸಪ್ಪ ಕೆ. ತಂದೆ ಮೂಗಪ್ಪ, ಹೊಸಪೇಟೆಯ ಕೆ.ದಿನೇಶ್ ತಂದೆ ಬೆಟ್ಟಪ್ಪ, ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಗರಗ ಗ್ರಾಮದ ವಡ್ಡರ ಶಿವರಾಜ ತಂದೆ ಲಕ್ಷ್ಮಣ ಎಂಬ ಮೂರು ಆರೋಪಿತರ ವಿರುದ್ಧ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಕರ್ನಾಟಕ ಅಗತ್ಯ ವಸ್ತುಗಳ(ಸಾರ್ವಜನಿಕ ವಿತರಣಾ ಪದ್ಧತಿ) ನಿಯಂತ್ರಣ ಆದೇಶ 2016 ಮತ್ತು ಅಗತ್ಯ ವಸ್ತುಗಳ(ಲೆಕ್ಕ ಪತ್ರ ನಿರ್ವಹಣೆ ದಾಸ್ತಾನು ಮತ್ತು ಬೆಲೆ ಪ್ರಕಟಣೆ) ಆದೇಶ 1981 ಹಾಗೂ ಐಪಿಸಿ 420ರ ಅಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿರುತ್ತದೆ.
ದಾಳಿ ಸಂದರ್ಭದಲ್ಲಿ ಹೊಸಪೇಟೆಯ ಆಹಾರ ಶಿರಸ್ತೇದಾರ್ ನಾಗರಾಜ್ ಹೆಚ್, ಪಟ್ಟಣದ ಕಂದಾಯ ನಿರೀಕ್ಷಕ ಅಂದಾನಗೌಡ, ಪಿಎಸ್‍ಐ ಎಂ.ಶಿವಕುಮಾರ ಹಾಗೂ ಸಿಬ್ಬಂದಿಗಳಾದ ಕೊಟ್ರೇಶ್, ಸಿದ್ದು ಹಾಗೂ ಇತರರು ಇದ್ದರು.