ಅನಧಿಕೃತವಾಗಿ ಎತ್ತುಗಳ ಮಾರಾಟ: ಕೇಶವ್ ಮೋಟಗಿ ವಿರುದ್ಧ ದೂರು

ಕಲಬುರಗಿ,ಮೇ.18-ನಗರದ ಆಳಂದ ರಿಂಗ್ ರಸ್ತೆಯ ಹತ್ತಿರವಿರುವ ನಂದಿ ಎನಿಮಲ್ ವೆಲ್‍ಫೇರ್ ಸೊಸೈಟಿಯಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಎರಡು ಎತ್ತುಗಳನ್ನು ರೈತರೊಬ್ಬರಿಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಕಾರ್ಯದರ್ಶಿ ಕೇಶವ್ ಅಲಿಯಾಸ್ ಹುಣಚೀರಾಯ ಮೋಟಗಿ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಮೈನಾಳ ಗ್ರಾಮದ ರೈತ ಶಿವಶರಣಪ್ಪ ಹಚ್ಚಡ ಎಂಬುವವರೇ ಈ ಸಂಬಂಧ ದೂರು ಸಲ್ಲಿಸಿದ್ದು, ಎರಡುವರೆ ಮೂರು ತಿಂಗಳ ಹಿಂದೆ ಕೇಶವ್ ಮೋಟಗಿ ಅವರು 55 ಸಾವಿರ ರೂಗೆ ಎರಡು ಎತ್ತುಗಳನ್ನು ತಮಗೆ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೇ ರೀತಿ ಅನೇಕ ರೈತರಿಂದ ಕೇಶವ ಮೋಟಗಿ ಹಣ ಪಡೆದು ಯಾವುದೇ ಅಧಿಕೃತ ಬಿಡುಗಡೆ ಆದೇಶವಿಲ್ಲದೆ ಸಂಸ್ಥೆಯಲ್ಲಿರುವ ಜಾನುವಾರುಗಳನ್ನು ಮಾರಾಟ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.