ಅನಧಿಕೃತವಾಗಿ ಅಂಗಡಿಗಳನ್ನು ತೆರೆದು ವ್ಯಾಪಾರ: ದಂಡ

ಮಂಗಳೂರು, ಜೂ.೯- ಮಹಾನಗರ ಪಾಲಿಕೆಯಿಂದ ವಿವಿಧ ತಂಡಗಳ ಮೂಲಕ ನಡೆಸಲಾದ ಕಾರ್ಯಾಚರಣೆಯ ವೇಳೆ ಕೋವಿಡ್ ೧೯ ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ ೭೮ ಅಂಗಡಿಗಳಿಗೆ ರೂ. ೬೮,೩೫೦/- ದಂಡನೆಯನ್ನು ವಿಧಿಸಲಾಗಿದೆ.
ಕೋವಿಡ್-೧೯ ಸಾಂಕ್ರಾಮಿಕ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿಗಳನ್ವಯ ಬೆಳ್ಳಗೆ ೬ ರಿಂದ ೧೦ ಗಂಟೆಯವೆರೆಗೆ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅನುಮತಿಸದೆ ಇರುವ ವಸ್ತುಗಳ ಅಂಗಡಿಗಳನ್ನು ಅನಧಿಕೃತವಾಗಿ ತೆರೆದು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ನಿನ್ನೆ ಮಹಾನಗರ ಪಾಲಿಕೆಯಿಂದ ವಿವಿಧ ತಂಡಗಳ ಮೂಲಕ ನಡೆಸಲಾದ ಕಾರ್ಯಾಚರಣೆಯ ವೇಳೆ ಕೋವಿಡ್ ೧೯ ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ ೭೮ ಅಂಗಡಿಗಳಿಗೆ ರೂ. ೬೮,೩೫೦/- ದಂಡನೆಯನ್ನು ವಿಧಿಸಲಾಗಿದೆ. ಈ ಪೈಕಿ ೩೦ ಅಂಗಡಿಗಳ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ ತಾತ್ಕಾಲಿಕವಾಗಿ ಮುಂದಿನ ಆದೇಶದ ವರೆಗೆ ಮುಚ್ಚಲಾಗಿದೆ. ಹಾಗೂ ಮುಂದುವರೆದು ಪೂರ್ವಾಹ್ನ ೧೦ ಗಂಟೆಯ ಅವಧಿ ಮೀರಿ ಕೋವಿಡ್ ೧೯ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರು ಅನಗತ್ಯ ಸಂಚರಿಸುತ್ತಿರುವವರನ್ನು ತಪಾಸಣೆ ನಡೆಸಿದಾಗ ಅನಗತ್ಯ ಓಡಾಟ ಮಾಡಿದ ೧೯ ಪ್ರಕರಣಗಳಿಗೆ ರೂ. ೮೦೫೦/- ದಂಡವನ್ನು ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.