ಅನಗತ್ಯ ಸಂಚಾರ: ಪೊಲೀಸರು ‘ದಂಡ’ ಪ್ರಯೋಗ

ಬಂಟ್ವಾಳ, ಮೇ ೨- ಕರೋನಾ ಕಫ್ರ್ಯೂ ಉಲ್ಲಂಘಿಸಿ ಅನಗತ್ಯ ಸಂಚಾರ ನಡೆಸುವ ವಾಹನ ಚಾಲಕರ ವಿರುದ್ದ ಬಂಟ್ವಾಳದಲ್ಲಿ ಪೊಲೀಸರು ಸವಾರಿ ಮಾಡಲಾರಂಭಿಸಿದ್ದಾರೆ. ಕೋವಿಡ್ ೨ನೇ ಅಲೆ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಸ್ವಯಂ ನಿಯಂತ್ರಣ ಸಾಧಿಸಬೇಕಾದ ತಾಲೂಕಿನ ಬುದ್ದಿವಂತ ಜನತೆಗೆ ಪೊಲೀಸರು ಸಾಕಷ್ಟು ಪ್ರಮಾಣದಲ್ಲಿ ಬುದ್ದವಾದದ ಹಿತನುಡಿಗಳನ್ನು ನೀಡಿದ್ದರಾದರೂ ನಿಯಂತ್ರಣಕ್ಕೆ ಬಾರದ ವಾಹನ ಚಾಲಕರ ವಿರುದ್ದ ಇದೀಗ ಪೊಲೀಸರು ‘ದಂಡ’ ಪ್ರಯೋಗ ಮಾಡಲಾರಂಭಿಸಿದ್ದಾರೆ.
ಅನಗತ್ಯ ಸಂಚಾರದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣಾ ಪೊಲೀಸ್ ಅಧಿಕಾರಿಗಳಾದ ಅವಿನಾಶ್ ಹಾಗೂ ಪ್ರಸನ್ನ ಅವರ ನೇತೃತ್ವದ ಪೊಲೀಸರು ಸುಮಾರು ೨೦ಕ್ಕೂ ಅಧಿಕ ವಾಹನಗಳನ್ನು ಮುಟ್ಟುಗೋಲು ಹಾಕಿ ದಂಡ ವಿಧಿಸಿದ್ದಾರೆ.
ತಾಲೂಕಿನ ಬಿ ಸಿ ರೋಡು, ಕೈಕಂಬ, ಬಂಟ್ವಾಳ, ಪಾಣೆಮಂಗಳೂರು, ಮೆಲ್ಕಾರ್, ಕಲ್ಲಡ್ಕ ಸಹಿತ ವಿವಿಧ ಪೇಟೆಗಳಲ್ಲಿ ಕಾರ್ಯಾಚರಣೆ ನಡೆಸಿದ
ಪೊಲೀಸರು ೨ ಕಾರು, ೧೮ ದ್ವಿಚಕ್ರ ವಾಹನಗಳ ಸಹಿತ ವಾಹನಗಳನ್ನು ಸೀಝ್ ಮಾಡಿ ದಂಡ ವಿಧಿಸಿದ್ದಾರೆ.
ಇನ್ನೊಂದು ಕಡೆಯಲ್ಲಿ ಬಂಟ್ವಾಳ ಪುರಸಭಾಧಿಕಾರಿ ಲೀನಾ ಬ್ರಿಟ್ಟೋ ಅವರು ಸಹಾಯಕ ಕಿರಿಯ ಇಂಜಿನಿಯರ್ ಜೊತೆಗೂಡಿ ಪೊಲೀಸರ ಸಹಕಾರದಿಂದ ನಗರ ಪ್ರದೇಶದ ಅಂಗಡಿ ಮುಂಗಟ್ಟಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವ ಸಾರ್ವಜನಿಕರ ವಿರುದ್ದವೂ
ದಂಡ ಪ್ರಯೋಗ ಮಾಡುತ್ತಿದ್ದಾರೆ.