ಅನಗತ್ಯ ವಿಳಂಬ ಸಲ್ಲದು – ಅಬ್ಬಯ್ಯ

ಹುಬ್ಬಳ್ಳಿ,ನ 19- ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯಿಂದ ಸ್ಮಾರ್ಟಸಿಟಿ ಕಾಮಗಾರಿಗಳು ಕುಂಟುತ್ತ ಸಾಗುತ್ತಿದ್ದು, ಕೊರೋನಾ, ಮಳೆ, ಹಬ್ಬದಂಥ ಕುಂಟು ನೆಪ ಹೇಳದೇ ಕಾಮಗಾರಿ ಪೂರ್ಣಗೊಳಿಸಬೇಕು. ಅನಗತ್ಯ ವಿಳಂಬ ಮಾಡಿದರೆ ಇನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಖಡಕ್ಕಾಗಿ ಎಚ್ಚರಿಸಿದರು.
ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಮೂಡಿಸಿ ಮಂದಗತಿಯಲ್ಲಿ ಸಾಗಿರುವ ಸ್ಮಾರ್ಟಸಿಟಿ ಕಾಮಗಾರಿಗಳಿಗೆ ಚುರುಕು ಮೂಡಿಸುವ ಸಲುವಾಗಿ ಬುಧವಾರ ಇಲ್ಲಿನ ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಮಾರ್ಟಸಿಟಿ ಯೋಜನೆಯಡಿ ಕೆಲವೆಡೆ ಕೈಗೊಂಡಿರುವ ಕಾಮಗಾರಿಗಳು ಅವ್ಯವಸ್ಥೆಯಿಂದ ಕೂಡಿವೆ. ಮಂದಗತಿಯ ಕಾಮಗಾರಿಗಳಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಘಂಟಿಕೇರಿ, ಜೋಳದ ಓಣಿಯಲ್ಲಿ ರಸ್ತೆ ಬದಿಯ ಮರ ತೆರವು ಮಾಡಲು ಸಂಬಂಧಿಸಿದ ಇಲಾಖೆಗಳು 7 ತಿಂಗಳಾದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗಟಾರ ಕಾಮಗಾರಿಗಳು ಪೂರ್ಣವಾಗದೇ ಅರ್ಧಕ್ಕೆ ಮೊಟಕುಗೊಂಡಿದ್ದು, ವೃದ್ದರು, ಚಿಕ್ಕಮಕ್ಕಳು ತಮ್ಮ ಮನೆಯಿಂದ ಆಚೆ ಬರಲೂ ಪರದಾಡುವಂತಾಗಿದೆ. ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ವಹಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಗಟಾರ, ಯುಜಿಡಿ ಕಾಮಗಾರಿ ಪೂರ್ಣಗೊಂಡ ಪ್ರದೇಶಗಳಲ್ಲಿ ಈವರೆಗೂ ರಸ್ತೆ ಕಾಮಗಾರಿ ಆರಂಭವಾಗಿಲ್ಲ. ಇದರಿಂದ ಧೂಳು ಹೆಚ್ಚಾಗಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಳೆಗಾಲ, ಹಬ್ಬದಂಥ ಕುಂಟು ನೆಪ ಹೇಳದೇ ಕೂಡಲೇ ರಸ್ತೆ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಶಾಸಕರು, ಎಲ್ಲೆಲ್ಲಿ 24*7 ಕುಡಿಯುವ ನೀರು ಹಾಗೂ ಯುಜಿಡಿ ಪೈಪ್‍ಲೈನ್ ಕಾಮಗಾರಿ ಆರಂಭವಾಗಿಲ್ಲವೋ ಅಲ್ಲಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಕೆಯುಐಡಿಎಫ್‍ಸಿ, ಅಮೃತ್ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರದ ಹಲವೆಡೆ ಕಸ ವಿಲೇವಾರಿ ಸಮರ್ಪಕವಾಗಿ ಕೈಗೊಳ್ಳದ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ವಲಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು ವಾರ್ಡವಾರು ಸಂಚರಿಸಿ ಕಸದ ಸಮಸ್ಯೆ ಬಗೆಹರಿಸಬೇಕು. ಕಸದ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಮುಂದಿನ ವಾರ ಕಾಮಗಾರಿಯ ಸ್ಥಿತಿಗತಿ ಕುರಿತು ಪರಿಶೀಲಿಸಲು ಪುನಃ ಭೇಟಿ ನೀಡಲಿದ್ದು, ಇದೇ ರೀತಿಯ ಅವ್ಯವಸ್ಥೆ, ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಪಾಲಿಕೆಯ ಅಧೀಕ್ಷಕ ಅಭಿಯಂತರ ಟಿ. ತಿಮ್ಮಪ್ಪ, ಸ್ಮಾರ್ಟಸಿಟಿ ಲಿ.ನ ಮುಖ್ಯ ಅಭಿಯಂತರ ಎಂ. ನಾರಾಯಣ, ಅಮೃತ್, ಕೆಯುಐಡಿಎಫ್‍ಸಿ, ಜಲಮಂಡಳಿ, ಹೆಸ್ಕಾಂ, ಪಾಲಿಕೆ ವಲಯ ಅಧಿಕಾರಿಗಳು, ಇತರರು ಇದ್ದರು.