ಅನಗತ್ಯ ವಸ್ತು ಮಾರಾಟ ಮಾಡುತ್ತಿದ್ದವರಿಗೆ ದಂಡ

ದಾವಣಗೆರೆ,ಮೇ.3: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಧ್ಯಾಹ್ನ 12 ಗಂಟೆಯ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ವೇಳೆ ಅಗತ್ಯವಲ್ಲದ ವಸ್ತುಗಳ ಅಂಗಡಿ ತೆರದು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿ, ಕರ್ಫ್ಯೂ ಮುಗಿಯುವ ವರೆಗೆ ಅಂಗಡಿ ತೆರೆಯದಂತೆ ತಾಕೀತು ಮಾಡಿದರು.ನಗರದ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ಕಾಯಿಪೇಟೆ ಮುಖ್ಯರಸ್ತೆ, ಕಾಳಿಕದೇವಿ ರಸ್ತೆ ಸೇರಿದಂತೆ ಹಲವಡೆ ವ್ಯಾಪಾರಸ್ಥರು ಪೂಜೆ ಸಾಮಗ್ರಿ, ಪಾತ್ರೆ, ಬಟ್ಟೆ, ಸ್ಟೇಷನರಿ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದರು.ಇದರ ಮಾಹಿತಿ ತಿಳಿದು ತಕ್ಷಭಣವೇ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು ಪ್ರತಿ ಅಂಗಡಿಗಳಿಗೂ ತಲಾ 500 ರೂ. ದಂಡ ವಿಧಿಸಿ, ಬಾಗಿಲು ಹಾಕಿಸಿದರು.ಮಧ್ಯಾಹ್ನ 12 ಗಂಟೆಯ ವರೆಗೂ ದಿನಸಿ ಅಂಗಡಿಗಳನ್ನು ತರೆದು ವರ್ತಕರು, ವ್ಯಾಪಾರ ನಡೆಸಿದರು. ಮದ್ಯದಂಗಡಿಗಳ ಮಾಲೀಕರು ಬೆಳಿಗ್ಗೆ 10 ಗಂಟೆಯ ವರೆಗೆ ವಹಿವಾಟು ನಡೆಸಿ ಬಾರ್‌ಗಳಿಗೆ ಬೀಗ ಹಾಕಿದರು. ತಳ್ಳುವ ಗಾಡಿ ವ್ಯಾಪಾರಸ್ಥರು ತರಕಾರಿ, ಹಣ್ಣುಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದ ದೃಶ್ಯ ಕಂಡು ಬಂತು. ಇನ್ನೂ ಹಾಪ್ ಕಾಮ್ಸ್, ಹಾಲಿನ ಅಂಗಡಿಗಳಿಗೆ ಸಂಜೆಯ ವರೆಗೂ ವ್ಯಾಪಾರ ನಡೆಸಲು ಅನುಮತಿ ಇರುವುದರಿಂದ ಇವು ನಿರಾತಂಕವಾಗಿ ವ್ಯಾಪಾರ ವಗಹಿವಾಟಿಲ್ಲಿ ತೊಡಗಿದ್ದವು.ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುವವರನ್ನು ತಡೆದು ಪೊಲೀಸರು ದಂಡ ವಿಧಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು ಬಂತು.