ಅನಗತ್ಯ ರಸ್ತೆಗಿಳಿದವರಿಗೆ ಲಾಠಿ ರುಚಿ ಸಾವಿರಾರು ವಾಹನಗಳ ವಶ

Cars are been sized by police at madiwala

ಬೆಂಗಳೂರು,ಏ.೨೫-ಕೊರೊನಾ ತಡೆಗಟ್ಟುವ ಜಾರಿಗೊಳಿಸಿರುವ ವಾರಾಂತ್ಯದ ಕರ್ಪ್ಯೂ ಎರಡನೇ ದಿನವಾದ ಇಂದು ಬೆಳಿಗ್ಗೆ ೬ ರಿಂದ ೧೦ ಗಂಟೆ ತನಕ ದಿನಸಿ, ತರಕಾರಿ, ಹಣ್ಣು, ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿ ನಂತರ ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಂಡರು.
ಬೆಳಿಗ್ಗೆ ೧೦ ಗಂಟೆ ನಂತರ ಪೊಲೀಸರು ಬಿಗಿ ಕ್ರಮಕ್ಕೆ ಮುಂದಾಗಿ ರಸ್ತೆಗಿಳಿದ ಬೈಕ್ ಮತ್ತು ಕಾರುಗಳನ್ನು ತಡೆದು ಕಾರಣ ಕೇಳಿ ದಾಖಲೆ ಪರಿಶೀಲನೆ ನಡೆಸಿದರು. ಕುಂಟುನೆಪ ಹೇಳಿಕೊಂಡು ರಸ್ತೆಗೆ ಬಂದವರಿಗೆ ಲಾಠಿ ರುಚಿಯನ್ನೂ ತೋರಿಸಿದರು.
ಅನಗತ್ಯವಾಗಿ ರಸ್ತೆಗೆ ಬಂದ ವಾಹನಗಳನ್ನು ವಶಪಡಿಸಿಕೊಳ್ಳುವುದನ್ನು ಇಂದು ತೀವ್ರಗೊಳಿಸಿ ಮಧ್ಯಾಹ್ನದ ವೇಳೆಗೆ ನಗರದ ಎಲ್ಲಾ ವಿಭಾಗದಲ್ಲಿ ಸುಮಾರು ೧೦೦೦ ಸಾವಿರಕ್ಕೂ ಹೆಚ್ಚು ವಾಹನಗಳನ್ನು ಜಪ್ತಿಮಾಡಲಾಯಿತು.
ಕರ್ಫ್ಯೂ ಮೊದಲ ದಿನವಾದ ನಿನ್ನೆ ೧,೨೦೦ಕ್ಕೂ ವಾಹನಗಳ ಜಪ್ತಿಮಾಡಲಾಗಿತ್ತು ಇಲ್ಲಿಯವರೆಗೆ ಸುಮಾರು ೨.೫೦೦ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಅಡ್ಡಗಟ್ಟಿ ಲಾಠಿ ಏಟು ನೀಡುತ್ತಿರುವ ಮಾಹಿತಿ ತಿಳಿದ ಬಳಿಕ ಜನಸಂಚಾರ ಕಡಿಮೆಯಾಯಿತು. ಪೊಲೀಸರ ಬಿಗಿ ಕ್ರಮದಿಂದಾಗಿ ನಗರದ ರಸ್ತೆಗಳೆಲ್ಲವೂ ಬಣಗುಡುತ್ತಿದ್ದವು.
ರಸ್ತೆಯಲ್ಲಿ ಅಡ್ಡಲಾಗಿ ಪೊಲೀಸರು ಕಾಣಿಸುತ್ತಿದ್ದಂತೆ ಬೈಕ್ ತಿರುಗಿಸಿಕೊಂಡು ಹೋಗುತ್ತಿದ್ದರು. ಆಸ್ಪತ್ರೆ, ಔಷಧ ಮಳಿಗೆಗಳಿಗೆ ತೆರಳುವವರು ಪೊಲೀಸರಿಗೆ ಮನವರಿಕೆ ಮಾಡಿಸಿ ಮುಂದೆ ಸಾಗಿದರೆ, ಅನವಶ್ಯಕವಾಗಿ ರಸ್ತೆಗೆ ಬಂದ ವೇಳೆ ವಶಕ್ಕೆ ಪಡೆದ ಬೈಕ್‌ಗಳನ್ನು ಬಿಡಿಸಿಕೊಳ್ಳಲು ಪೊಲೀಸ್ ಠಾಣೆಗಳ ಮುಂದೆ ಜನ ಜಮಾಯಿಸಿದ್ದರು.
ಇನ್ನು ದಿನಸಿ ಮಳಿಗೆಗಳು, ಬಿಗ್ ಬಜಾರ್, ಮೆಗಾಮಾರ್ಟ್, ಡಿಮಾರ್ಟ್ ಸೇರಿ ಸಣ್ಣಪುಟ್ಟ ಮಾರ್ಟ್‌ಗಳಿಗೆ ಬೆಳಿಗ್ಗೆಯಿಂದಲೇ ಜನ ಮುಗಿಬಿದ್ದಿದ್ದರು. ರಸ್ತೆ ಬದಿಯ ತರಕಾರಿ ಮಳಿಗೆ, ಮಾಂಸದ ಅಂಗಡಿಗಳ ಬಳಿಯೂ ಜನ ಜಮಾಯಿಸಿದ್ದು ಬೆಳಿಗ್ಗೆ ೧೦ರ ನಂತರ ಪೊಲೀಸರು ಅಗತ್ಯ ವಸ್ತುಗಳ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದರು.
ನಗರದಲ್ಲಿ ಎಲ್ಲಾ ರೀತಿಯ ಅಂಗಡಿ – ಮುಂಗಟ್ಟುಗಳು, ಹೋಟೆಲ್‌ಗಳು, ಬಾರ್ ಮತ್ತು ರಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಘೋಷಿತ ಬಂದ್ ಘೋಷಣೆಯಾದಂತಿತ್ತು.