ಅನಗತ್ಯ ರಸ್ತೆಗಿಳಿದವರಿಗೆ ಪೊಲೀಸರ ಲಾಠಿ ರುಚಿ

ಬೆಂಗಳೂರು,ಏ.೨೪-ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ, ಕಠಿಣ ನಿಯಮಗಳು ಜಾರಿಯಾಗಿವೆ.
ಬೆಂಗಳೂರು ಸೇರಿ ರಾಜ್ಯಾದ್ಯಂತ ರಸ್ತೆಗಿಳಿದಿರುವ ಪೊಲೀಸರು ಅನಗತ್ಯವಾಗಿ ಓಡಾಡುವವರಿಗೆ ವಾಹನಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸುತ್ತಿದ್ದಾರೆ.
ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆ ೬ಗಂಟೆಯಿಂದ ೧೦ ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿತ್ತು.ಆದರೆ ಈ ಸಮಯದಲ್ಲೂ ಅನಗತ್ಯ ಓಡಾಟ ನಡೆಸದಂತೆ ಸೂಚನೆ ನೀಡಲಾಗಿತ್ತು. ಆದರೂ ಜನರು ನಿಯಮ ಉಲ್ಲಂಘಿಸಿ ರಸ್ತೆಗಳಲ್ಲಿ ಬೇಕಾಬಿಟ್ಟಿ ಓಡಾಟ ನಡೆಸಿ ವಾಹನಗಳಲ್ಲಿ ಸಂಚರಿಸಿ ಬೇಜವಾಬ್ದಾರಿ ಮೆರೆದಿದ್ದಾರೆ.
ನಗರದಲ್ಲಿ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡಿರುವ ಪೊಲೀಸರು ೧೨೦ಬೈಕ್, ೧೫ ಕಾರು, ೧೦ ಆಟೋ ಸೇರಿ ನೂರಾರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ರಾಯಚೂರಿನಲ್ಲೂ ಪೊಲೀಸರು ಕಾರ್ಯಾಚರಣೆ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದವರ ಮೇಲೆ ಕ್ರಮ ಜರುಗಿಸಿದ್ದಾರೆ. ೨೫ ವಾಹನಗಳನ್ನ ಸೀಜ್ ಮಾಡಿದ್ದಾರೆ.
ಡಿವೈಎಸ್ ಪಿ ಶಿವನಗೌಡಪಾಟೀಲ್ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿ ೨೫ ವಾಹನಗಳನ್ನ ಜಪ್ತಿ ಮಾಡಿದ್ದಾರೆ.
ಗದಗದಲ್ಲೂ ಸಹ ಪೊಲೀಸರು ಕಾರ್ಯಚಾರಣೆ ನಡೆಸಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದವರ ೧೦ ವಾಹನಗಳನ್ನು ಜಪ್ತಿ ಮಾಡಿದ್ದಾರೆ.ಕಲ್ಬುರ್ಗಿ ತರಕಾರಿ ಮಾರುಕಟ್ಟೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸಿದ್ದಾರೆ.
ಹೀಗೆ ರಾಜ್ಯಾದ್ಯಂತ ಫೀಲ್ಡ್ ಗಿಳಿದಿರುವ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಅನಗತ್ಯವಾಗಿ ರಸ್ತೆಗಿಳಿಯುವವರ ವಿರುದ್ದ ಕ್ರಮ ಕೈಗೊಳ್ಳುತ್ತಿದ್ದಾರೆ.