ಅನಗತ್ಯವಾಗಿ ರಸ್ತೆಗಿಳಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ತುಮಕೂರು, ಏ. ೧೧- ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತುಮಕೂರು ನಗರದಲ್ಲೂ ರಾತ್ರಿ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ರಾತ್ರಿ ೧೦ ಗಂಟೆಯ ನಂತರ ಅನಗತ್ಯವಾಗಿ ರಸ್ತೆಗಿಳಿದಿದ್ದ ಸಾರ್ವಜನಿಕರಿಗೆ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಬಿಸಿ ಮುಟ್ಟಿಸಿದ್ದಾರೆ.
ಕೊರೊನಾ ಮಹಾಮಾರಿ ಸೋಂಕು ನಗರದಲ್ಲಿ ಹೆಚ್ಚಾಗಿ ಹರಡುತ್ತಿದ್ದು, ಇದರ ವೇಗಕ್ಕೆ ಕಡಿವಾಣ ಹಾಕಿ ಸಂಪೂರ್ಣ ನಿಯಂತ್ರಿಸುವ ಸಲುವಾಗಿ ನಗರಲ್ಲಿ ಏ. ೨೦ರ ವರೆಗೆ ಕೊರೊನಾ ರಾತ್ರಿ ಕರ್ಫ್ಯೂ ಜಾರಿಗೆ ಬಂದಿದೆ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ರಾತ್ರಿ ೧೦ರ ನಂತರ ನಗರ ಪ್ರವೇಶಿಸುವವರ ಸಂಪೂರ್ಣ ತಪಾಸಣೆ ಮಾಡಿ ಅವಶ್ಯಕ ಇದ್ದವರಿಗೆ ಮಾತ್ರ ಒಳ ಪ್ರವೇಶಿಸಲು ಅವಕಾಶ ನೀಡಿ, ಅನಗತ್ಯವಾಗಿ ಇಲ್ಲಸಲ್ಲದ ನೆಪವೊಡ್ಡಿ ಓಡಾಡುತ್ತಿದ್ದವರಿಗೆ ಮೊದಲನೆ ಬಾರಿಗೆ ಎಚ್ಚರಿಕೆ ನೀಡುವುದರ ಜತೆಗೆ ಬಿಸಿ ಮುಟ್ಟಿಸಿ ಕಳುಹಿಸಿದ್ದಾರೆ.
ನಗರದ ಕುಣಿಗಲ್ ರಸ್ತೆಯ ರಿಂಗ್ ರಸ್ತೆ ವೃತ್ತ, ಗುಬ್ಬಿ ಗೇಟ್, ಬಟವಾಡಿ, ಸಿರಾ ರಸ್ತೆಯ ಗಡಿ ಭಾಗ ಹಾಗೂ ಬೆಂಗಳೂರಿನಿಂದ ತುಮಕೂರು ನಗರ ಪ್ರವೇಶಿಸುವ ಗಡಿಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಹದ್ದಿನಕಣ್ಣಿಟ್ಟು ಕಾರ್ಯನಿರ್ವಹಿಸಿದ ದೃಶ್ಯಗಳು ರಾತ್ರಿ ಕಂಡು ಬಂದವು.
ರಾತ್ರಿ ೧೦ ಗಂಟೆಯ ನಂತರ ನಗರದ ಎಲ್ಲ ರಸ್ತೆಗಳು ವಾಹನ ಸಂಚಾರ ಇಲ್ಲದೆ, ಜನರ ಓಡಾಟ ಇಲ್ಲದೆ ನೀರವ ಮೌನ ಆವರಿಸಿ ಬಿಕೋ ಎನ್ನುತ್ತಿದ್ದವು.
ಏ. ೨೦ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಮನವಿ ಮಾಡಿದ್ದಾರೆ.
ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಸಂದರ್ಭದಲ್ಲಿ ವಿನಾ ಕಾರಣ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿರುವ ಅವರು, ಇದಕ್ಕೆ ಅವಕಾಶ ನೀಡದೆ ಕೊರೊನಾ ಕರ್ಫ್ಯೂ ನಿಯಮಗಳನ್ನು ಪಾಲಿಸುವಂತೆ ಕೋರಿದರು.
ಕಾರ್ಖಾನೆ ಕಾರ್ಮಿಕರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ೯.೫೦ ರೊಳಗೆ ತಾವು ಕೆಲಸ ಮಾಡುವ ಕಂಪೆನಿ, ಸಂಸ್ಥೆಗಳನ್ನು ಸೇರಿಕೊಳ್ಳಬೇಕು ಎಂದು ಅವರು ಹೇಳಿದರು.
ನನಗೆ ತುಮಕೂರು ಜನರ ಮೇಲೆ ನಂಬಿಕೆ ಇದೆ. ಹಾಗಾಗಿ ಯಾವುದೇ ರಸ್ತೆ ಬಂದ್ ಮಾಡುವುದಿಲ್ಲ. ಯಾರೂ ನಿಯಮಗಳನ್ನು ಉಲ್ಲಂಘನೆ ಮಾಡುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.