ಅನಗತ್ಯವಾಗಿ ಓಡಾಡಿದರೆ ಬಂಧನ; ಕಮೀಷನರ್ ‌ಎಚ್ಚರಿಕೆ

ಬೆಂಗಳೂರು,ಏ.23-ನಗರದಲ್ಲಿ ಇಂದು ರಾತ್ರಿಯಿಂದ ಕರ್ಫ್ಯೂ ಇರುವ ಕಾರಣ ಕುಂಟು ನೆಪ ಹೇಳಿಕೊಂಡು ಹೊರಬಂದರೆ ಬಂಧಿಸುತ್ತೇವೆ. ಅನಗತ್ಯವಾಗಿ ವಾಹನ ರಸ್ತೆಗಿಳಿಸಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್​ ಅವರು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ವಾರಾಂತ್ಯದ ಕರ್ಫ್ಯೂಗೆ ನಗರದ ಜನತೆ ಸಹಕರಿಸಬೇಕು ಎಂದು ಅವರು ನಾಗರೀಕರಲ್ಲಿ ವಿನಮ್ರ ಮನವಿ‌ ಮಾಡಿಕೊಂಡಿದ್ದಾರೆ.
ರಾತ್ರಿ 9ರಿಂದ ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ. ಸ್ವಿಗ್ಗಿ, ಜೊಮ್ಯಾಟೊ ಟಿ ಶರ್ಟ್​ಗಳು ದುರ್ಬಳಕೆಯಾಗುತ್ತಿವೆ. ಸ್ವಿಗ್ಗಿ, ಜೊಮ್ಯಾಟೊಗೆ ಸಂಬಂಧಿಸದವರು ಟಿ ಶರ್ಟ್‌ ಬಳಸಿ ಹೊರಗೆ ಬಂದರೆ ಕೂಡಲೇ ಬಂಧಿಸಲಾಗುವುದು.
ಅನುಮತಿ ಪಡೆದಿರುವವರು ಕೂಡ ಅನಗತ್ಯವಾಗಿ ಓಡಾಡದಿರಿ ಎಂದು ಅವರು ಮಾಧ್ಯಮಗಳ ಮೂಲಕ ನಾಗರಿಕರಿಗೆ ತಿಳಿಸಿದರು. 
ಮದುವೆಗೆ ಅನುಮತಿ ಪಡೆದವರು ರಾತ್ರಿ 9ರ ಒಳಗೆ ಕಲ್ಯಾಣ ಮಂಟಪ ಸೇರಿಕೊಳ್ಳಬೇಕು. ವೈದ್ಯಕೀಯ ತುರ್ತು ಸೇವೆಗಾಗಿ ಸಂಖ್ಯೆ 100ಕ್ಕೆ ಕರೆ ಮಾಡಬಹುದು. ತೊಂದರೆಗೀಡಾದವರಿಗೆ ಪೊಲೀಸರಿಂದ ಅವಶ್ಯವಾಗಿ ಸಹಕಾರ ಸಿಗುತ್ತದೆ. ಸಹಾಯಕ್ಕಾಗಿ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗಿದೆ. ಎಂದು ಅವರು ತಿಳಿಸಿದರು.
ವಾರಾಂತ್ಯದ ಕರ್ಫ್ಯೂ ಇಂದಿನಿಂದ ಆರಂಭವಾಗುವ ಕಾರಣ ತಮ್ಮ ಸ್ವಂತ ಊರುಗಳತ್ತ ಬೆಂಗಳೂರಿನಿಂದ ನೂರಾರು ಜನರು ತೆರಳುತ್ತಿದ್ದಾರೆ.
ಹೀಗಾಗಿ ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತೆರಳುವ ನೆಲಮಂಗಲ ಬಳಿಯ ನವಯುಗ ಟೋಲ್​​ ಬಳಿ ವಾಹನ ದಟ್ಟಣೆ ಉಂಟಾಗಿದೆ.