ಅನಕ್ಷರಸ್ಥ 120 ಬಂದಿಗಳಿಗೆ ಸಾಕ್ಷರರನ್ನಾಗಿ ಮಾಡಿದ ಕಲಬುರಗಿ ಕಾರಾಗೃಹ

ಕಲಬುರಗಿ,ಆ.7: ಕೇಂದ್ರ ಕಾರಾಗೃಹ ಕಲಬುರಗಿಯ ಅನಕ್ಷರಸ್ಥ ಬಂದಿಗಳಿಗೆ (2022-2023ನೇ ಸಾಲಿನ) ಸಾಕ್ಷರತಾ ಕಾರ್ಯಕ್ರಮದಡಿ ಲಿಂಕ್ ಡಾಕ್ಯೊಮೆಂಟ್ ಅನುದಾನದಡಿ ಮೂಲಸಾಕ್ಷರತಾ ಕಾರ್ಯಕ್ರಮದ ಮೌಲ್ಯ ಮಾಪನವನ್ನು ಜಿಲ್ಲಾ ಲೋಕ ಸಮಿತಿ ವತಿಯಿಂದ ಸಾಕ್ಷರರಾದ ಬಂದಿಗಳಿಗೆ ಮೌಲ್ಯಮಾಪನವನ್ನು ಮಾಡಿದರು.
ವಿವಿಧ ಅಪರಾಧವೆಸಗಿ ಶಿಕ್ಷೆ ಅನುಭವಿಸುತ್ತಿರುವ ಬಂದಿಗಳಲ್ಲಿ 120 ಜನ ಅನಕ್ಷರಸ್ಥ ಬಂದಿಗಳನ್ನು ಗುರುತಿಸಿ (20 ಮಹಿಳಾ ಬಂದಿಗಳು, 100 ಪುರುಷ ಬಂದಿಗಳು) ಅವರನ್ನು ಕಾರಾಗೃಹದಲ್ಲಿದ್ದ ಅಕ್ಷರಸ್ಥ ಬಂದಿಗಳನ್ನು ಸ್ವಯಂ ಸೇವಕ ಬೋಧಕರನ್ನಾಗಿ ನಿಯೋಜಿಸಿ ಅವರಿಗೆ ತರಬೇತಿಯನ್ನು ನೀಡಿ ತರಬೇತಿಗೆ ಅನುಗುಣವಾಗಿ ಲಿಂಕ್ ಡಾಕ್ಯೊಮೆಂಟ್ ವಿವಿಧ ಮೂಲ ನವ ಸಾಕ್ಷರರ ಕಾರ್ಯಕ್ರಮ ಯೋಜನೆಯಡಿಯಲ್ಲಿ 180 ದಿನಗಳ ಒಟ್ಟು 6 ತಿಂಗಳವರೆಗೆ ಅಂದರೆ, ಕಳೆದ 2022ರ ಅಕ್ಟೋಬರ್ 1ರಿಂದ 2023ರ ಮಾರ್ಚ್ 31ರವರೆಗೆ ಬಾಳಿಗೆ ಬೆಳಕು ಎಂಬ ಪುಸ್ತಕದ ಮೂಲಕ ಅನಕ್ಷರಸ್ಥ ಬಂದಿಗಳಿಗೆ ಅಕ್ಷರ ಕಲಿಸಲು ಮುಂದಾದಾಗ ಅವರೆಲ್ಲ ಅತ್ಯಂತ ಉತ್ಸುಕತೆಯಿಂದ ಸರಸ್ವತಿಯ ಆರಾಧಕರಾಗಿ ಕೈಯಲ್ಲಿ ಕಪ್ಪು ಹಲಗೆ (ಪಾಟಿ) ಮತ್ತು ಬಳಪವನ್ನು ಹಿಡಿದು ಅಕ್ಷರ ಮೂಡಿಸುತ್ತಾ, ಪದ ರಚಿಸಿ ನಂತರ ಕೈಯಲ್ಲಿ ಪೆನ್ನು (ಲೇಖನಿ) ಹಿಡಿದು ಬಿಳಿ ಹಾಳೆಯ ಮೇಲೆ ಅಕ್ಷರಗಳನ್ನು ಬರೆಯುವುದರ ಮೂಲಕ ಮಹತ್ತರವಾದ ಬದಲಾವಣೆಯನ್ನು ತಂದು ಸಂತೋಷ ವ್ಯಕ್ತ ಪಡಿಸಿದರು. ಈಗ ಅವರೂ ಕೂಡ ಪರೀಕ್ಷೇಯನ್ನು ಬರೆಯುತ್ತಿರುವುದಕ್ಕೆ ಅತ್ಯಂತ ಹರುಷವನ್ನು ವ್ಯಕ್ತ ಪಡಿಸಿದರು.
ಮೌಲ್ಯ ಮಾಪನದಲ್ಲಿ ಕೇಂದ್ರ ಕಾರಾಗೃಹದ ಕಲಿಕಾರ್ಥಿಗಳು ತಾವು ಅಪರಾಧಿಗಳು ಎಂಬ ಭಾವನೆ ಮರೆತು, ಉತ್ಸಾಹದಿಂದ ಮೌಲ್ಯ ಮಾಪನ ಕಾರ್ಯದಲ್ಲಿ ಪಾಲ್ಗೊಂಡು ಮೌಲ್ಯ ಮಾಪನದ ಪ್ರಶ್ನೆ ಪತ್ರಿಕೆಯನ್ನು ಓದಿ ಅರ್ಥ ಮಾಡಿಕೊಂಡು ಸಮರ್ಪಕವಾದ ಉತ್ತರ ನೀಡಿರುವುದು ಸಾಕ್ಷರತೆಯ ಬಗ್ಗೆ ಅವರಲ್ಲಿ ಇರುವ ಶ್ರದ್ಧೆಯನ್ನು ಕಂಡು ಮೌಲ್ಯ ಮಾಪಕ ತಂಡದವರಿಗೆ ವಿಸ್ಮಯದ ಜೊತೆಗೆ ವಿನೂತನ ಅನುಭವ ನೀಡಿತು.
ಈ ಕುರಿತು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್ ಅವರು ಮಾತನಾಡಿ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಕಲಬುರಗಿ ವತಿಯಿಂದ ಮೌಲ್ಯ ಮಾಪನವನ್ನು ಕೇಂದ್ರ ಕಾರಾಗೃಹದಲ್ಲಿ ಆರಂಭಿಸಿದರು. ಜೈಲು ಹಕ್ಕಿಗಳ ಅಕ್ಷರದ ಬಗ್ಗೆ ಅವರಲ್ಲಿ ಇರುವ ಅಕ್ಷರ ಬೀಜೊಕ್ತಿಯ ಪದ ಪುಂಜಗಳ ಹೂಂ…..ಕಾರದ ಕಲರವದ ಒಲವು, ಅಕ್ಕರೆ, ಪ್ರೇಮವನ್ನು ಕಂಡು ಮೌಲ್ಯ ಮಾಪಕರಿಗೆ ಆಶ್ಚರ್ಯ ಮತ್ತು ಅಪೂರ್ವ ಅನುಭವ ನೀಡಿತು ಎಂದರು.
ಮೌಲ್ಯ ಮಾಪನದ ಕಾರ್ಯದಲ್ಲಿ 120 ಜನ ಕಲಿಕಾರ್ಥಿಗಳು ಭಾಗವಹಿಸಿದ್ದರು. ಕಲಿಕೆಯ ಬಗ್ಗೆ ಅವರಿಗಿರುವ ಅಭಿರುಚಿ ತುಂಬಾ ಶ್ಲಾಘನೀಯ……. ಮೂಲತಃ ಅನಕ್ಷರಸ್ಥರಾಗಿದ್ದ ಇವರನ್ನು ಸಾಕ್ಷರತಾ ಕಾರ್ಯಕ್ರಮದಡಿ ಸುಮಾರು 6 ತಿಂಗಳ ಅವಧಿಯಲ್ಲಿ ಇವರಿಗೆ ಓದುವುದು, ಬರೆಯುವುದು, ಲೆಕ್ಕಾಚಾರ ಮುಂತಾದವುಗಳನ್ನು ಸಾಮಾನ್ಯ ವ್ಯವಹಾರದ ಜ್ಞಾನವನ್ನು ಹೇಳಿ ಕೋಡುವುದರ ಮೂಲಕ ಕಲಿಕಾರ್ಥಿಗಳನ್ನು ಸಾಕ್ಷರರನ್ನಾಗಿಸುವುದರಲ್ಲಿ ಕಾರಾಗೃಹದ ಸ್ವಯಂ ಸೇವಕ ಬೋಧಕರು ಹಾಗೂ ಸಮನ್ವಯಾಧಿಕಾರಿ, ಶಿಕ್ಷಕ ನಾಗರಾಜ್ ಅವರು ಯಶಸ್ವಿಯಾಗಿದ್ದಾರೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಅದು ಅಲ್ಲದೇ ಲಿಂಕ್ ಡಾಕ್ಯೊಮೆಂಟ್ ವಿವಿಧ ಮೂಲ ಸಾಕ್ಷರತೆ ಯೋಜನೆಯು ಕೇಂದ್ರ ಕಾರಾಗೃಹದಲ್ಲಿ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡ ಪ್ರಯುಕ್ತ, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ, ಕರ್ನಾಟಕ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ನವಂಬರ್ 2021ರಿಂದ ರಾಜ್ಯಾದ್ಯಂತ ನಿರಂತರ ಕಲಿಕೆಯನ್ನು ನವಚೇತನದಡಿಯಲ್ಲಿ ಯೋಜನೆ ಜಾರಿಗೆ ತರಲಾಗಿಯೆಂದು ಅವರುತಿಳಿಸಿದರು.
ಮೌಲ್ಯ ಮಾಪನದ ಕಾರ್ಯವು ಸುಸುತ್ರವಾಗಿ ನಡೆಯುವಂತೆ ನೋಡಲು ವೀಕ್ಷಕರಾಗಿ ಆಗಮಿಸಿದ ಲೋಕ ಶಿಕ್ಷಣ ಸಮಿತಿ ಜಿಲ್ಲಾ ಸಂಯೋಜಕ ಶಿವಾನಂದ್ ಚವ್ಹಾಣ್ ಅವರು ಮೌಲ್ಯ ಮಾಪನ ಕಾರ್ಯವು ಅತ್ಯಂತ ಪರಿಣಾಮಕಾರಿಯಾಗಿ ಯಶಸ್ವಿಯಾಗಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿದ್ದರು. ಸಂಸ್ಥೆಯ ಸಹಾಯಕ ಅಧೀಕ್ಷಕ ವಿ. ಕೃಷ್ಣಮೂರ್ತಿ ಹಾಗೂ ಅಶೋಕ್ ಹೊಸಮನಿ, ಜೈಲರ್ ಹಾಗೂ ಮೌಲ್ಯ ಮಾಪಕರು ಪಾಲ್ಗೊಂಡು ಮೌಲ್ಯ ಮಾಪನ ಕಾರ್ಯ ಪೂರ್ಣಗೊಳಿಸಲು ಸಹಕಾರಿಯಾದರು.