ಅನಕ್ಷರತೆ, ಮೌಢ್ಯ ತೊಡೆದು ಹಾಕುವಲ್ಲಿ ವಿಜ್ಞಾನ ಪರಿಷತ್ತಿನ ಪಾತ್ರ ದೊಡ್ಡದು


ದಾವಣಗೆರೆ.ನ.೧೨; ಕಳೆದ ೪೦ ವರ್ಷಗಳ ಹಿಂದೆ ಭಾರತೀಯ ವಿಜ್ಞಾನ ಮಂದಿರದ ಸಣ್ಣ ಕೊಠಡಿಯಲ್ಲಿ ಪ್ರಾರಂಭಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇಂದು ನಾಡಿನ ವಿಜ್ಞಾನ ಪ್ರಸಾರ ಮಾಡುವ ಬಹುದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಈ ನೆಲದ ಮಾತೃಭಾಷೆ ಕನ್ನಡದಲ್ಲಿ ವಿಜ್ಞಾನ ಪ್ರಸಾರ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಮೌಢ್ಯತೆಯ ವಿರುದ್ಧ ಅನಕ್ಷರತೆಯ ವಿರುದ್ಧ ಹೋರಾಟ ಆರಂಭಿಸಿ, ಜನ ವಿಜ್ಞಾನ ಚಳುವಳಿಯನ್ನು ಕಟ್ಟಿದ ಪರಿಣಾಮ ಸಮಾಜದಲ್ಲಿ ಸಣ್ಣ ಬದಲಾವಣೆ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಅನಕ್ಷರತೆ, ಮೌಢ್ಯ ತೊಡೆದು ಹಾಕುವಲ್ಲಿ ವಿಜ್ಞಾನ ಪರಿಷತ್ತಿನ ಪಾತ್ರ ದೊಡ್ಡದಾಗಿದೆ ಎಂದು ದಾವಣಗೆರೆ ಜಿಲ್ಲಾ ಕ.ರಾ.ವಿ.ಪ.ದ ನಿಕಟಪೂರ್ವ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ತಿಳಿಸಿದರು. ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದಾವಣಗೆರೆ ಜಿಲ್ಲಾ ಸಮಿತಿ ಜೀಜಾ ಮಾತಾ ಶಾಲೆಯಲ್ಲಿ ಏರ್ಪಡಿಸಿದ್ದ ಕ.ರಾ.ವಿ.ಪ. ೪೦ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕನಸು “ಪ್ರಾದೇಶಿಕ ಉಪವಿಜ್ಞಾನ ಕೇಂದ್ರದ” ಸ್ಥಾಪನೆ ಮಾಡುವುದಾಗಿತ್ತು. ಕ.ರಾ.ವಿ.ಪ.ದ ನಿರಂತರ ಪರಿಶ್ರಮದ ಫಲವಾಗಿ ದಾವಣಗೆರೆ ತಾಲ್ಲೂಕು, ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದ ಎದುರುಗಡೆ ೪ ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಉಪವಿಜ್ಞಾನ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ. ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡಲೆ ಕೇಂದ್ರವನ್ನು ಉದ್ಘಾಟಿಸಿ ಈ ಜಿಲ್ಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿದ್ದ ಶಿಕ್ಷಕ ದೊಡ್ಡಮನಿ ಕೆಂಚಪ್ಪ ಮಾತನಾಡಿ, ಜನ ತಮ್ಮ ನೈಜ ಸಮಸ್ಯೆಗಳಿಗೆ ನೈಜ ಕಾರಣಗಳನ್ನು ತಿಳಿದು, ಪರಿಹರಿಸಿಕೊಳ್ಳುವ ಬದಲು, ಮಾಟ, ಮಂತ್ರದ ಕಡೆಗೆ ವಾಲುವ ಜನರೇ ಹೆಚ್ಚಾಗಿದ್ದ ಕಾಲಘಟ್ಟದಲ್ಲ ಜನರು ಸಮಾಜದ ಪ್ರಗತಿ ಹಾಗೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅವರಿಗೆ ವಿಜ್ಞಾನದ ಮಾಹಿತಿಯನ್ನು ನೀಡುವ ಅಗತ್ಯವಿದೆ ಎಂದು ಚಿಂತಿಸಿದ ಹಿರಿಯರು ಕ.ರಾ.ವಿ.ಪ.ವನ್ನು ಸ್ಥಾಪಿಸಿದರು. “ಬಾಲ ವಿಜ್ಞಾನ” ಪತ್ರಿಕೆಯ ಮೂಲಕ ಕನ್ನಡದಲ್ಲಿ ವಿಜ್ಞಾನದ ಮಾಹಿತಿಯನ್ನು ಜನಸಾಮಾನ್ಯರಿಗೆ, ವಿದ್ಯಾರ್ಥಿ-ಯುವಜನರಿಗೆ ತಿಳಿಸುವ ಕಾರ್ಯವನ್ನು ಕ.ರಾ.ವಿ.ಪ. ನಿರಂತರವಾಗಿ ಮಾಡುತ್ತಾ ಬಂದಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಸಮಾರಂಭದ ಮತ್ತೊಬ್ಬ ಅತಿಥಿಗಳಾದ ಹೆಚ್.ಎಂ.ಪ್ರಕಾಶ್ ಮಾತನಾಡಿ “ಸರಳ ವಿಜ್ಞಾನ ಪ್ರಯೋಗಗಳು, ಕನ್ನಡ ವಿಜ್ಞಾನ ಸಮ್ಮೇಳನ, ನೀನೇ ಮಾಡಿ ನೋಡು, ಆಕಾಶ ವೀಕ್ಷಣೆ, ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ, ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ, ಪವಾಡ ರಹಸ್ಯ ಬಯಲು, ಜೀವ ವೈವಿದ್ಯ ಸಂರಕ್ಷಣೆ ಕುರಿತಾದ ವೈಜ್ಞಾನಿಕ ಕಾರ್ಯಕ್ರಮಗಳ ಮೂಲಕ ಈ ನಾಡಿನಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಶ್ರಮಿಸಿದ ಹೆಮ್ಮೆಯ ಸಂಸ್ಥೆಯಾಗಿದೆ. ವಿಜ್ಞಾನವನ್ನ ಜನಪ್ರಿಯಗೊಳಿಸುವ ಶ್ರೇಷ್ಠ ಸಾಂಸ್ಥಿಕ ಪ್ರಯತ್ನಕ್ಕೆ ಮೀಸಲಾದ ಭಾರತ ಸರ್ಕಾರದ ಎನ್.ಸಿ.ಎಸ್.ಟಿ.ನೀಡುವ ಪ್ರಶಸ್ತಿಗೆ ಕ.ರಾ.ವಿ.ಪ. ಭಾಜನವಾಗಿದೆ. ೨೦೧೧ ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಪರಿಸರ ಪ್ರಶಸ್ತಿ ಕ.ರಾ.ವಿ.ಪ.ದ ಮೂಡಿಗೇರಿರುವುದು ಸಂತಸ ತಂದಿದೆ. ವಿಶೇಷವಾಗಿ ಕ.ರಾ.ವಿ.ಪ.ಗೆ ಮೆರಗು ತಂದ “ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ” ಅತ್ಯಂತ ಸಂಭ್ರಮ ಮತ್ತು ವೈಚಾರಿಕತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ ಪರಶುರಾಮರೆಡ್ಡಿ ವಹಿಸಿದ್ದರು.