ಅನಂದ ಕಂದರ ಸಂಸ್ಮರಣೆ- ಪ್ರಶಸ್ತಿ ಪ್ರದಾನ ಸಮಾರಂಭ


ಧಾರವಾಡ,ಎ.18: ಆನಂದಕಂದರು ನೇರನುಡಿಯ ವ್ಯಕ್ತಿಯಾಗಿದ್ದರು. ನೈತಿಕತೆಯನ್ನು ಅನುಸರಿಸಿಕೊಂಡು ಬಂದವರು, ಅವರ ಇಡೀ ವ್ಯಕ್ತಿತ್ವ ನವೋದಯದ ಕಿಚ್ಚಿನಿಂದ ಕೂಡಿತ್ತು ಗಾಂಧಿವಾದವನ್ನು ಒಪ್ಪಿಕೊಂಡವರು, ವರ್ಗಭೇದಗಳನ್ನು ದಿಕ್ಕರಿಸಿ ಬದುಕುತ್ತಿದ್ದರು. ಒಬ್ಬ ಕವಿ, ಕಥೆಗಾರ, ವಿಮರ್ಶಕ, ಪತ್ರಕರ್ತರಾಗಿ ಬದುಕಿದ್ದಷ್ಟು ದಿನ ಸಮಾಜದಲ್ಲಿ ಪ್ರೀತಿ ಕಂಡುಕೊಂಡಿದ್ದರು ಎಂದು ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ರಾಘವೇಂದ್ರ ಪಾಟೀಲ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ ಬಲಪಡಿಸಲೆಂದು ಡಾ. ಪಂಡಿತ ಅವಳೀಕರ ಅವರು ಕೊಡಮಾಡಿದ ದತ್ತಿ ನಿಮಿತ್ತ ಆಯೋಜಿಸಿದ್ದ ಆನಂದಕಂದರ ಸಂಸ್ಮರಣೆ ಹಾಗೂ ‘ಆನಂದಕಂದ-2020, 2021’ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಧಾರವಾಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕರಾದ ಡಾ. ಸದಾಶಿವ ಮರ್ಜಿ ಅವರು, ಆನಂದಕಂದರು ಒಬ್ಬ ಸೃಜಶೀಲ ಬರಹಗಾರರು ಸಾತ್ವಿಕತೆ ಮತ್ತು ತಾತ್ವಿಕತೆ ಎರಡನ್ನು ಸೇರಿಸಿದರೆ ಅವರೇ ಆನಂದಕಂದ. ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ ನಿರಂತರ ಮಧುರವಾಗಿರಲೆಂದು ಪಂ. ಅವಳೀಕರ ಅವರು ಸಂಘದಲ್ಲಿ ಇರಿಸಿರುವ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪ್ರತಾಪ ಚವ್ಹಾಣ ಮಾತನಾಡಿ, ನಾಡಿನ ಹಿರಿಯ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಕೊಡಮಾಡುವ ಪ್ರಶಸ್ತಿ ಅಮೂಲ್ಯವಾದದ್ದು. ಸಂಘ ಸಂಸ್ಥೆ ಕಟ್ಟುವುದು ದೊಡ್ಡದಲ್ಲ, ಅದನ್ನು ಸರಿಯಾಗಿ ಬೆಳೆಸಿಕೊಂಡು, ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ 2020ರ ಆನಂದಕಂದ ಪ್ರಶಸ್ತಿಯನ್ನು ರಬಕವಿಯ ವಿಶ್ರಾಂತ ಅಧ್ಯಾಪಕರಾದ ಎಸ್.ಎಂ. ದಾಶಾಳ ಅವರಿಗೆ ಮತ್ತು 2021ನೇ ವರ್ಷದ ಆನಂದ ಕಂದ ಪ್ರಶಸ್ತಿಯನ್ನು ಬೆಳಗಾವಿಯ ಸಾಹಿತಿಗಳಾದ ದೀಪಿಕಾ ಉದಯ ಚಾಟೆ ಅವರಿಗೆ ಪ್ರದಾನ ಮಾಡಿ ಗೌರವಿಸಿದರು.
ಪ್ರಾರಂಭದಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಬೆಳಗಾವಿ ಇವರ ಸಹಯೋಗದಲ್ಲಿ ‘ಆನಂದಕಂದ’ ಗೆಳೆಯರ ಬಳಗ, ಧಾರವಾಡ ಇವರಿಂದ ‘ಆನಂದಕಂದರ’ ಗೀತಗಾಯನ ಜರುಗಿತು. ರಾಜು ಕುಲಕರ್ಣಿ, ಶಂಕರ ಮಂಗಳಗಟ್ಟಿ, ಹೇಮಂತ ಲಮಾಣಿ, ಸೋಮಲಿಂಗ ಜಾಲಿಹಾಳ, ದೀಪಾ ಹಾವನೂರ, ಕು. ಅರ್ಚನಾ ಪತ್ತಾರ, ಕು. ವೀಣಾ ಚಿಕ್ಕಮಠ, ಕು. ಸಂಗೀತಾ ನಾಯಕ ಗೀತಗಾಯನ ಪ್ರಸ್ತುತಪಡಿಸಿದರು. ತಬಲಾ ಸಾಥ್ ಅನೀಲ ಮೇತ್ರಿ, ವಾದಿರಾಜ ದಂಡಾಪುರ ಹಾರ್ಮೋನಿಯಂ ಸಾಥ್ ಕೆ.ಜಿ. ಪಾಟೀಲ ಹಾಗೂ ವಾಯಲಿನ್ ಸಾಥ್ ಶಂಕರ ಕಬಾಡಿಯವರು ನೀಡಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವಪ್ರಭು ಹೊಸಕೇರಿ ಅವರು ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಜ ಪಾಟೀಲ ಹಾಗೂ ಶ್ರೀನಾಥ ಬೆಟಗೇರಿ, ಶೈಲಜಾ ಕುಲಕರ್ಣಿ, ಸುಚೇತಾ ಬೆಟಗೇರಿ, ಅನುರಾಧಾ ಕುಲಕರ್ಣಿ, ರಾಧಾ ಶ್ಯಾಮರಾವ್, ವಿಜಯೇಂದ್ರ ಪಾಟೀಲ, ವೀರಣ್ಣ ಪತ್ತಾರ ಸೇರಿದಂತೆ ಅನೇಕರು ಇದ್ದರು.