ಅನಂತ ಬಿರಾದಾರಗೆ ಪ್ರಾಕೃತಿಕ ಚಿಕಿತ್ಸಾ ಕ್ಷೇತ್ರದಲ್ಲಿನ ಸೇವೆಗೆ ಅಂತರಾಷ್ಟ್ರೀಯ ಪ್ರಶಸ್ತಿ : ಅಭಿನಂದನೆ

ಬೀದರ್ : ಜ.10:ತನ್ನ ಇಡಿ ಬದುಕನ್ನ ಸಮಾಜ ಸೇವೆಗೆ ಸಮರ್ಪಿಸಿಕೊಂಡು ವಿಶೇಷವಾಗಿ ನ್ಯಾಚುರೋಪತಿ (ಪ್ರಾಕೃತಿಕ ಚಿಕಿತ್ಸಾ) ಕ್ಷೇತ್ರದಲ್ಲಿ ಅಹರ್ನಿಶಿಯಾಗಿ ಶ್ರಮಿಸುತ್ತಿರುವ ಬೀದರ ಜಿಲ್ಲೆಯ ಅನಂತ ಬಿರಾದಾರ ಅವರ ಸೇವೆಯನ್ನು ಪರಿಗಣಿಸಿ ವಿಯೆಟ್ನಾಂ ದೇಶದಲ್ಲಿ ಗೌರವಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಅಟಲ್ ಫೌಂಡೇಶನ್ ಅಧ್ಯಕ್ಷ ಗುರುನಾಥ ಕೊಳ್ಳುರು ಹೇಳಿದರು.

ಜನೆವರಿ 6 ರಂದು ವಿಯೆಟ್ನಾಂ ದೇಶದ ಆರ್ಥಿಕ ರಾಜಧಾನಿ ಹು-ಚೂ-ಮಿನ್ ನಗರದಲ್ಲಿ ವಲ್ರ್ಡ್ ರೆಕಾರ್ಡ್ ಯೂನಿಯನ್ (ಅಮೇರಿಕಾ), ವಿಯೆಟ್ನಾಂ ರೆಕಾರ್ಡ್ ಅಸೋಸಿಯೇಷನ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ವತಿಯಿಂದ ಆಯೋಜಿಸಿದ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಿಯೆಟ್ನಾಂ ಸಚಿವರಾದ ಚಿನ್- ಹೂ ಹಾಗೂ ಇಂಡೋ ವಿಯೆಟ್ನಾಂ ಆರೋಗ್ಯ ಮಂಡಳಿಯ ನಿರ್ದೇಶಕ ಡಾ.ವಿಶ್ವರೂಪರಾಯ ಚೌದ್ರಿಯವರು ಪ್ರಾಕೃತಿಕ ಚಿಕಿತ್ಸಾ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಸಂಸ್ಥೆಗಳಲ್ಲಿ ಜಗತ್ತಿನ ದೊಡ್ಡ ಸಂಘಟನೆ ಐ.ಎನ್.ಓ ಎಂಬುದನ್ನ ಗುರುತಿಸಿ ಈ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಅನಂತ ಬಿರಾದರ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಶುಭಹಾರೈಸಿ ಗೌರವಿಸಿದರು.

ಏಶಿಯಾ ಖಂಡದ ರಾಷ್ಟ್ರಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಸಂಘ ಸಂಸ್ಥೆಗಳನ್ನು ಮತ್ತು ಪ್ರಮುಖರನ್ನು ಗುರುತಿಸಿ ಗೌರವಿಸುತ್ತಾರೆ ಅದರಲ್ಲಿ ಐ.ಎನ್.ಓ ಸಂಸ್ಥೆಯ ಕೆಲಸವನ್ನ ಗುರುತಿಸಿ ಗೌರವಿಸಿದ್ದು ನಮ್ಮ ಸೌಭಾಗ್ಯ ಎಂದು ಅನಂತ ಬಿರಾದರ ಹೇಳಿದರು.

ಬೀದರ ನಗರದ ಉದ್ಗೀರ ರಸ್ತೆಯಲ್ಲಿನ ಅಟಲ್ ಫೌಂಡೇಶನ್ ಕಛೇರಿಯಲ್ಲಿ ಅನಂತ ಬಿರಾದಾರ ಅವರಿಗೆ ಅಭಿನಂದಿಸಿದ ಬಳಿಕ ಮಾತನಾಡಿದ ಅಟಲ್ ಫೌಂಡೇಶನ್ ಅದ್ಯಕ್ಷ ಗುರುನಾಥ ಕೊಳ್ಳುರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದವರಲ್ಲಿ ನಮ್ಮ ಬೀದರ ಜಿಲ್ಲೆಯ ಅನಂತ ಬಿರಾದರ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಬೀದರ ಜಿಲ್ಲೆಗೆ ಹೆಮ್ಮೆಯ ವಿಶಯವಾಗಿದೆ ಇವರು ನಮ್ಮ ಜಿಲ್ಲೆಯ ಯುವಕರಿಗೆ ಪ್ರೇರಣೆ ಎಂದರು.

ಅಟಲ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಅವರು ಮಾತನಾಡಿ ಅನಂತ
ಬಿರಾದರ ಅವರು ಬಾಲ್ಯದಿಂದಲೂ ಸಕ್ರಿಯರಾಗಿದ್ದು ಸಮಾಜದ ಹಿತಕ್ಕೆ ಮಿಡಿಯುವ ಹೃದಯ ಅವರದ್ದು ಅವರಿಗೆ ಈ ಪ್ರಶಸ್ತಿ ದೊರಕಿರುವುದು ಬೀದರ ಜಿಲ್ಲೆಗೆ ಸಂದ ಬಹುದೊಡ್ಡ ಗೌರವವಾಗಿದ್ದು ಇವರಿಗೆ ಅಟಲ್ ಫೌಂಡೇಶನ್ ವತಿಯಿಂದ ಗೌರವಿಸಲು ಹೆಮ್ಮೆ ಎನಿಸುತ್ತಿದೆ ಎಂದರು.

ಸೂರ್ಯ ಫೌಂಡೇಶನ್ ಸಂಚಾಲಕ ಗುರುನಾಥ ರಾಜಗೀರಾ ಮಾತನಾಡಿ ಅನಂತ ಬಿರಾದರ ಅವರು
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ರಾಚಪ್ಪಾ ಗೌಡಗಾಂವ ಗ್ರಾಮದವರು, ಬಾಲ್ಯದಿಂದಲೆ ರಾಷ್ಟ್ರೀಯ ಸ್ವಯಂ ಸೇವಕಸಂಘದ ಸ್ವಯಂ ಸೇವೆಕರಾಗಿ ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತನಲ್ಲಿ ಸಕ್ರಿಯರಾಗಿದ್ದುಕೊಂಡು ಬಳಿಕ ಕಳೆದ ಎರಡು ದಶಕಗಳಿಂದ ಪದ್ಮಶ್ರೀ ಜಯಪ್ರಕಾಶ್ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ ಸೂರ್ಯ ಫೌಂಡೇಶನ್ ನಲ್ಲಿ ಸಕ್ರಿಯರಾಗಿ ಇಂಟನ್ರ್ಯಾಷನಲ್ ನ್ಯಾಚುರಪತಿಯ ಸಂಸ್ಥೆಯ (ಪ್ರಾಕೃತಿಕ ಚಿಕಿತ್ಸಾ) ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ಭಾರತ ಸರ್ಕಾರದ ಆಯುಶ್ ಇಲಾಖೆಯ ಆಡಳಿತ ಮಂಡಳಿ ಸದಸ್ಯರಾಗಿ ಇಲಾಖೆಯ ಬೆಳವಣಿಗೆಗಾಗಿಯು ಸೇವೆಗೈಯುತಿದ್ದಾರೆ.

ಭಾರತ ದೇಶಾದ್ಯಂತ ಮತ್ತು ಇಪ್ಪತ್ತು ವಿದೇಶಗಳಲ್ಲಿ ಐ.ಎನ್.ಓ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡುತಿದ್ದು ಈ ಸಂಸ್ಥೆಯ ಕೆಲಸವನ್ನು ಗುರುತಿಸಿ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆಯು ಜಗತ್ತಿನಲ್ಲಿಯೆ ಅತ್ಯುತ್ತಮ ಸಂಸ್ಥೆಯೆಂದು ಗುರುತಿಸಿ ಅದರ ಮುಖ್ಯಸ್ಥರಾದ ಅನಂತ ಬಿರಾದಾರ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದ್ದು ಬೀದರ ಜಿಲ್ಲೆಗೆ ಸಂದ ಗೌರವವಾಗಿದ್ದು ಐ.ಎನ್.ಓ ಬೀದರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಬೀದರ ಜಿಲ್ಲೆಯ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಗುರುನಾಥ ರಾಜಗೀರಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಬಾಬುರಾವ ಕಾರಬಾರಿ, ಅಟಲ್ ಫೌಂಡೇಶನ್ ನಿರ್ದೇಶಕರಾದ ಸಚಿನ್ ಕೊಳ್ಳುರ, ಐ.ಎನ್.ಓ ಜಿಲ್ಲಾಧ್ಯಕ್ಷ ದೊಂಡಿರಾಮ ಚಾಂದಿವಾಲೆ ಉಪಸ್ಥಿತರಿದ್ದರು.