ಅನಂತ ಕುಮಾರ್ ಹೆಗಡೆ ವಿರುದ್ಧ ಕ್ರಮ ಜರುಗಿಸಿ: ಸೈಯದ್ ಖಾಲಿದ್ ಅಹ್ಮದ್ ಆಗ್ರಹ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೧೩: ಸಂವಿಧಾನ ಬದಲಾವಣೆ ಕುರಿತಂತೆ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಮಾತನಾಡಿರುವುದು ಖಂಡನೀಯ. ದೇಶದ ಸಂವಿಧಾನವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದ್ರೆ, ಅನಂತ ಕುಮಾರ್ ಹೆಗಡೆ ಇಂಥ ಹೇಳಿಕೆ ನೀಡಿರುವುದು ಖಂಡನೀಯ ಎಂದು ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ. ಕಾಂಗ್ರೆಸ್ ನವರು ಏನೇನೋ ತುರುಕಿದ್ದಾರೆ ಎಂಬ ಉಡಾಫೆ ಹೇಳಿಕೆ ನೀಡುವ ಮೂಲಕ ದೇಶದ ಕೋಟ್ಯಂತರ ಜನರಿಗೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಇಂಥವರು ಜನಪ್ರತಿನಿಧಿಯಾಗಲು ಅರ್ಹರಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಥವರಿಗೆ ಟಿಕೆಟ್ ನೀಡಬಾರದು ಎಂದು ಹೇಳಿದ್ದಾರೆ. ದೇಶದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿ ಈ ಹಿಂದೆ ಕ್ಷಮೆಯಾಚಿಸಿದ್ದ ಅನಂತ ಕುಮಾರ್ ಹೆಗಡೆ ಮತ್ತೆ ಈ ಮಾತು ಆಡಿರುವುದು ಅನುಮಾನಕ್ಕೆ ಕಾರಣವಾಗಿದೆ. ದೇಶದ ಜನರು ಅರ್ಥಮಾಡಿಕೊಳ್ಳಬೇಕಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಥವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದಾರೆ. ಅನಂತ ಕುಮಾರ್ ಹೆಗಡೆ ಮೂಲಕ ಆರ್ ಎಸ್ ಎಸ್ ಹಿಡನ್ ಅಜೆಂಡಾ ಬಟಾಬಯಲಾಗಿದೆ. ಬಿಜೆಪಿ ಪಕ್ಷವು ಎಲ್ಲಾ ವರ್ಗದವರ ಪರ ಎನ್ನುತ್ತದೆ. ಆದ್ರೆ, ಸಂವಿಧಾನವನ್ನೇ ಬದಲಾಯಿಸುತ್ತೇವೆಂಬ ಇಂಥ ಹೇಳಿಕೆ ನೀಡುವವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ದೇಶದ ಜನರ ಪ್ರಶ್ನೆ. ಇಂಥವರಿಗೆ ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುವುದು ನಿಜ. ದೇಶದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವುದು ದುಷ್ಟ ಆಲೋಚನೆ. ಇಂಥದ್ದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.