`ಅಧ್ಯಾಯ’ ಆರಂಭ  

ಶಾಂತ ಜಯರಾಂ  ನಿರ್ಮಿಸುತ್ತಿರುವ ಹಾಗೂ ಸಮರ್ಥ್ ಎಂ ನಿರ್ದೇಶನದಲ್ಲಿ ಚೈತನ್ಯ ಬಂಜಾರ ಅವರು ನಾಯಕನಾಗಿ ನಟಿಸುತ್ತಿರುವ “ಅಧ್ಯಾಯ” ಚಿತ್ರ ಸೆಟ್ಟೇರಿದೆ.

ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಶಾಂತ ಜಯರಾಂ ಆರಂಭಫಲಕ ತೋರಿದರು. ಅಣಜಿ ನಾಗರಾಜ್ ಕ್ಯಾಮೆರಾ ಚಾಲನೆ ಮಾಡಿದರು.   

“ಅಧ್ಯಾಯ” ಶಿಕ್ಷಣ ವ್ಯವಸ್ಥೆಯ ಕುರಿತಾದ ಸಿನಿಮಾ. ಕನ್ನಡ ಹಾಗೂ ಬಂಜಾರ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಶಿಕ್ಷಣದಿಂದ ವಂಚಿತರಾಗಿದ್ದ ಬುಡಕಟ್ಟು ಜನಾಂಗದ ಮಕ್ಕಳು ವಿದ್ಯಾವಂತರಾದ ಮೇಲೆ ಏನೆಲ್ಲಾ ಆಗುತ್ತದೆ ಎಂಬುದೆ ಈ ಚಿತ್ರದ ಕಥಾಸಾರಾಂಶ.

“ಅಧ್ಯಾಯ” ಕಮರ್ಷಿಯಲ್ ಚಿತ್ರವಾಗಿದ್ದು, ಆಕ್ಷನ್, ಸೆಂಟಿಮೆಂಟ್, ಸಸ್ಪೆನ್ಸ್, ಕಾಮಿಡಿ ಸೇರಿದಂತೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿರುತ್ತದೆ.  ನಿರ್ದೇಶಕ ಸಮರ್ಥ್ ಅವರೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ಹರೀಶ್ ಗೌಡ ಬರೆದಿದ್ದಾರೆ. ಕನ್ನಡದಲ್ಲಿ ಈಗಾಗಲೇ “ರುಧೀರ ಕಣಿವೆ” ಸೇರಿದಂತೆ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಸಮರ್ಥ್ ಅವರಿಗೆ ಇದು ನಾಲ್ಕನೇ ಚಿತ್ರ. ಮೇ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.                 

ಚೈತನ್ಯ ಬಂಜಾರ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಶೋಭ್ ರಾಜ್, ಬಲ ರಾಜವಾಡಿ, ನಾಗೇಂದ್ರ ಅರಸ್, ಯತಿರಾಜ್, ನಿರಂಜನ್, ದತ್ತಾತ್ರೇಯ, ಪ್ರಹ್ಲಾದ್, ಜಯರಾಮ್ ಮುಂತಾದವರಿದ್ದಾರೆ.   

ಐದು ಹಾಡುಗಳಿರುವ ಚಿತ್ರಕ್ಕೆ ಹರ್ಷ ಕೊಗೋಡು ಸಂಗೀತ ನೀಡಲಿದ್ದಾರೆ.  ಭರತ್  ಛಾಯಾಗ್ರಹಣ ಹಾಗೂ ಸುನಯ್ ಎಸ್ ಜೈನ್ ಸಂಕಲನವಿರುವ  “ಅಧ್ಯಾಯ” ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದ್ದು, ಚಂದ್ರು ಬಂಡೆ ಹಾಗೂ ಅಶೋಕ್ ಸಾಹಸ ನಿರ್ದೇಶನ ಮಾಡಲಿದ್ದಾರೆ.