ಅಧ್ಯಾಪಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ

ಕಲಬುರಗಿ:ಜು.29: ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರ ನಡುವೆ ಇರುವ ಸೇವೆಗೆ ಸಂಬಂಧಿಸಿದಂತೆ ವ್ಯತ್ಯಾಸಗಳು, ಕೆಜಿಐಡಿ ಅವಕಾಶ, ಹಳೆ ಪಿಂಚಣಿ ಜಾರಿ, ಅನುಕಂಪ ಆಧಾರಿತ ನೇಮಕಾತಿ, ಅತಿಥಿ ಉಪನ್ಯಾಸಕರ ಖಾಯಂಗೊಳಿಸುವುದು ಸೇರಿದಂತೆ ಮುಂತಾದ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡಲು ಪ್ರಾಮಾಣಿಕ, ನಿರಂತರವಾಗಿ ಪ್ರಯತ್ನ ಮಾಡುತ್ತೇನೆ ಎಂದು ಗುವಿವಿ ಖಾಸಗಿ ಅನುದಾನಿತ ಅಧ್ಯಾಪಕರ ಸಂಘದ ನೂತನ ಅಧ್ಯಕ್ಷ ಪ್ರೊ.ನೀಲಕಂಠ ಕಣ್ಣಿ ಹೇಳಿದರು.
ನಗರದ ಸೈಯದ್ ಚಿಂಚೋಳಿ ಕ್ರಾಸ್ ಸಮೀಪದ ಶ್ರೀಮತಿ ಕಸ್ತೂರಿಬಾಯಿ ವಿಠ್ಠಲರಾವ ಪಾಟೀಲ ದಣ್ಣೂರ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’, ಕಸಾಪ ಉತ್ತರ ವಲಯ, ಸ್ನೇಹ ಸಂಗಮ ವಿವಿದೋದ್ಧೇಶ ಸೇವಾ ಸಂಘ, ಕಲಬುರಗಿ ಗೆಳೆಯರ ಬಳಗ, ಕೆವಿಪಿ ಕಾಲೇಜು ಇವುಗಳು ಸಂಯುಕ್ತವಾಗಿ ಶನಿವಾರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಕೊಪ್ಪಳ ಗವಿಸಿದ್ಧೇಶ್ವರ ಪದವಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ನಾಗರಾಜ ದಂಡೋತಿ ಹೆಬ್ಬಾಳ್ ಮಾತನಾಡಿ, ಪ್ರೊ.ಕಣ್ಣಿ ಅವರು ಆದರ್ಶ ಶಿಕ್ಷಕರು, ದಕ್ಷ ಆಡಳಿತಗಾರರು, ಸದಾ ವಿದ್ಯಾರ್ಥಿಗಳ ಏಳ್ಗೆಯನ್ನು ಬಯಸುವ ಅಪರೂಪದ ಪ್ರಾಧ್ಯಾಪಕರು. ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸಂಘಟನೆಯಲ್ಲಿ ಸೇವೆ ಸಲ್ಲಿಸಿರುವುದರಿಂದ ಅಧ್ಯಾಪಕರ ಸಮಸ್ಯೆಗಳನ್ನು ಹತ್ತರದಿಂದ ಗಮನಿಸಿ, ಅನುಭವಿಸಿದ್ದವರು. ಹೀಗಾಗಿ ಸಂಘದ ನೂತನ ಅಧ್ಯಕ್ಷರಾಗಿರುವುದರಿಂದ ಸಾಕಷ್ಟು ನಿರೀಕ್ಷೆ ಇದ್ದು, ಅದಕ್ಕೆ ಪ್ರಯತ್ನಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕೆವಿಪಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್, ಸ್ನೇಹ ಸಂಗಮ ವಿವಿದೋದ್ಧೇಶ ಸೇವಾ ಸಂಘದ ಅಧ್ಯಕ್ಷ ಹಣಮಂತರಾಯ ಎಸ್.ಅಟ್ಟೂರ್, ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮುಲಗೆ, ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಪ್ರೊ.ಶಿವಪುತ್ರಪ್ಪ ಚಿಕ್ಕಬಸ್ತಿ, ಪ್ರಮುಖರಾದ ಮಾರುತಿ ರಾಠೋಡ್, ಕಿರಣ ಕಲಶೆಟ್ಟಿ, ಶರಣು ಉಪ್ಪಿನ್, ಮಂಜುನಾಥ ಅಟ್ಟೂರ್, ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.