ಅಧ್ಯಯನ ಸಂಶೋಧನಾ ತಂಡದಿಂದ: ಪ್ರಾಗೈತಿಹಾಸಿಕ ಸಂಶೋಧನೆ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ಜ.11: ಪ್ರಾಗೈತಿಹಾಸಿಕ ಕಾಲದ ಬುದ್ದಿವಂತ ಮಾನವನ ನೆಲೆಯಾದ ಪಟ್ಟಣದ ನೈರುತ್ಯ ದಿಕ್ಕಿನಲ್ಲಿರುವ ಹುಢೇದ ಗುಡ್ಡ, ಬೂದಿದಿಬ್ಬ, ಜಕ್ಕೆರ್ ಗುಡ್ಡಗಳ ಬಯಲಿನಲ್ಲಿ ಇತಿಹಾಸ ಸಂಶೋಧನೆ ಕೈಗೊಳ್ಳಲು ಅಮೇರಿಕದ ನ್ಯೂಯಾರ್ಕ್ನ  ಹಾರ್ಟ್ವಿಕ್ ಕಾಲೇಜಿನ ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ.ನಮಿತಾ ಸಂಜಯ್ ಸುಗಂಧಿ ಮತ್ತು ಪ್ರೋ.ಡಾ.ಶಾರದಾ ಶ್ರೀನಿವಾಸನ್ ನೇತೃತ್ವದ ತಂಡವು ಭೇಟಿ ನೀಡಿದ್ದಾರೆ.
ತಂಡದಲ್ಲಿ ಬೆಂಗಳೂರು ಐಐಎಸ್ಸಿಯ ಡಾ.ದಿಯಾ ಮುಖರ್ಜಿ ಮತ್ತು ಡಾ.ಉದಯ್‌ಕುಮಾರ್ ದೆಹಲಿಯ ಐಆರ್‌ಎಸ್‌ನ ಆದಾಯ ತೆರಿಗೆ ವಿಭಾಗದ ಎಸಿ ದೇವೇಂದ್ರ ಸಿಂಗ್ ಚೌದರಿ ಇದ್ದಾರೆ.
ಪಟ್ಟಣದ ಸುತ್ತಮುತ್ತಲಿನ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಸುಮಾರು 3700 ವರ್ಷಗಳ ಹಿಂದೆ ವಾಸವಾಗಿದ್ದ ಜನರ ಕುರುಹುಗಳು ಪತ್ತೆಯಾಗಿದ್ದು, ಹೊಸ ಶಿಲಾಯುಗದ ಬುದ್ದಿವಂತ ಮಾನವ ವಾಸವಾಗಿದ್ದ ನೆಲೆಯಾಗಿದೆ. ಲೋಹದ ಬಳಕೆ ತಿಳಿದಿದ್ದ ಮಾನವನ ಹೆಚ್ಚಿನ ಅಧ್ಯಯನ ಕೈಗೊಂಡು, ಲೋಹದ ಕುಲುಮೆ ಮಾದರಿ ರಚಿಸಿ ಈ ಮೂಲಕ ಲೋಹ ಕರಗಿಸುವಿಕೆ ಹಾಗೂ ವಿವಿಧ ರೀತಿಯ ಆಯುಧ ತಯಾರಿಕಾ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗುವುದು ಎಂದು ಪ್ರಾಧ್ಯಾಪಕಿ ಡಾ.ನಮಿತಾ ಸಂಜಯ್ ಸುಗಂಧಿ ತಿಳಿಸಿದರು. 
ಜ.17 ವರೆಗೆ ಸಂಶೋಧನಾ ಕಾರ್ಯ ಮಡೆಯಲಿದ್ದು ಆದಿ ಮಾನವನ ನೀರಿನ ನೆಲೆಗಳು ಹಾಗೂ ಜಲ ಸಂರಕ್ಷಣಾ ವಿಧಾನ, ಬೆಟ್ಟಗಳಲ್ಲಿ ನಿರ್ಮಾಣವಾಗಿರುವ ನೈಸರ್ಗಿಕ ಕೆರೆ ಗುಹೆಗಳಲ್ಲಿ ನೀರಿನ ಸಂರಕ್ಷಣೆ ಕುರಿತಂತೆ ಹೆಚ್ಚಿನ ಅಧ್ಯಯನ ನಡೆಯಲಿದ್ದು ಆಸಕ್ತರು ಭಾಗವಹಿಸಲು ಅವಕಾಶ ನೀಡಲಾಗುವುದು ತಿಳಿಸಿದರು. ಸಿ.ಎಂ ಮನೋಹರ,‌ ಎಂ.ಕಾಡಸಿದ್ದ, ಚಾಂದ್ ಭಾಷ ಹಾಗೂ ಸಂಶೋಧನಾರ್ಥಿ ಅಶೋಕ್ ಅಧಿಕಾರಿ ಇದ್ದರು.