ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ:ದೇವರಾಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.02: ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಸ್ಥಾನಕ್ಕೆ ತಾವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಅಧ್ಯಕ್ಷ ಬಿ.ಎಲ್.ದೇವರಾಜು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಕಳೆದ 41 ತಿಂಗಳ ಹಿಂದೆ ನಡೆದ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯಲ್ಲಿ ನಾನು ಸೇರಿದಂತೆ ಎಲ್ಲಾ 14 ಜನ ನಿರ್ದೇಶಕರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರೂ ಅಂದು ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ನಮ್ಮನ್ನು ಬೆಂಬಲಿಸಿದೆ. ನಮ್ಮ ಗೆಲುವಿನ ಹಿಂದೆ ಕಾಂಗ್ರೆಸ್ ಪಕ್ಷದ ಕೊಡುಗೆಯಿದೆ. ಆದ ಕಾರಣ ನನ್ನ ಪಕ್ಷಾಂತರಕ್ಕೂ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಸ್ಥಾನಕ್ಕೂ ಪರಸ್ಪರ ಸಂಬಂಧವಿದ್ದು ನೈತಿಕ ರಾಜಕಾರಣದ ಪ್ರಶ್ನೇಯೇ ಉದ್ಬವಿಸುವುದಿಲ್ಲ ಎಂದಿದ್ದಾರೆ.
ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ಆಗಿದ್ದ ಆಂತರಿಕ ಒಪ್ಪಂದದಂತೆ ನಾನು 30 ತಿಂಗಳ ಅನಂತರ ಅಧಿಕಾರ ತ್ಯಾಗ ಮಾಡಬೇಕಾಗಿತ್ತು. ಇದಕ್ಕೆ ನಾನು ಬದ್ದನಾಗಿಯೂ ಇದ್ದೆ. ಆದರೆ 30 ತಿಂಗಳ ನನ್ನ ಅಧಿಕಾರದ ಅವಧಿ ಪೂರೈಸುವ ಮುನ್ನವೇ ಕೆಲವರು ನನ್ನ ವಿರುದ್ದ ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿಸಿ ನನ್ನ ವ್ಯಕ್ತಿತ್ವಕ್ಕೆ ಕುಂದು ತರುವ ಪ್ರಯತ್ನ ನಡೆಸಿದ್ದರು. ಅವಿಶ್ವಾಸ ಸಹಿ ಸಂಗ್ರಹ ಆರಂಭಿಸಿದ ಕಾರಣ ನನ್ನನ್ನು ಬೇಕಾದರೆ ಅವಿಶ್ವಾಸ ತಂದು ಕೆಳಗಿಳಿಸಲಿ. ಟಿ.ಎ.ಪಿ.ಎಂ.ಎಸ್ ಅಧ್ಯಕ್ಷನಾಗಿ ನನ್ನಿಂದ ಯಾವುದೇ ತಪ್ಪು ನಡೆದಿದ್ದರೆ ಪ್ರಶ್ನಿಸಲಿ. ನನ್ನ ಅಧಿಕಾರದ ಅವಧಿಯಲ್ಲಿ ಸಂಘದ ದುಂದುವೆಚ್ಚವನ್ನು ತಗ್ಗಿಸಿದ್ದೇನೆ. ಸಂಘ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ರಾಜಕೀಯ ಕಾರಣಕ್ಕಾಗಿ ಕೆಲವರು ನನ್ನ ವಿರುದ್ದ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ. ನನ್ನ ನೈತಿಕತೆಯ ಬಗ್ಗೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ನನ್ನ ಪ್ರಾಮಾಣಿಕತೆಯ ಬಗ್ಗೆ ಕ್ಷೇತ್ರದ ಜನರಿಗೆ ಅರಿವಿದೆ. ರಾಜಕೀಯ ದುರುದ್ದೇಶದಿಂದ ಕೆಲವರು ಟಿ.ಎ.ಪಿ.ಸಿ.ಎಂ.ಎಸ್ ಸಭೆಗೆ ಬಾರದೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ಇವರ ಒತ್ತಡಕ್ಕೆ ನಾನು ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ. ನಿಯಮಾನುಸಾರ ಕೋರಂ ಅಭಾವದಿಂದ ಸಹಕಾರ ಸಂಘದ ಸಭೆಗಳು ಮೂರುಬಾರಿ ಮುಂದೂಡಲ್ಪಟ್ಟರೆ ಅಂತಹ ಸಹಕಾರ ಸಂಘದ ಆಡಳಿತ ಮಂಡಲಿ ತಾನೇ ತಾನಾಗಿ ವಜಾಗೊಂಡು ಹೊಸದಾಗಿ ಚುನಾವಣೆ ನಡೆಸಬೇಕಾಗುತ್ತದೆ. ಈಗ ಎರಡು ಸಭೆಗಳಿಗೆ ಗೈರು ಹಾಜರಾಗಿರುವವರು ಮುಂದಿನ ಸಭೆಗೂ ಗೈರು ಹಾಜರಾಗಲಿ. ಬೇಕಾದರೆ ನಾವೆಲ್ಲರೂ ಮತ್ತೆ ಚುನಾವಣೆಯನ್ನು ಎದುರಿಸಿ ಮರು ಆಯ್ಕೆಯಾಗೋಣ ಎಂದು ಬಿ.ಎಲ್.ದೇವರಾಜು ಸವಾಲು ಹಾಕಿದ್ದಾರೆ.