
ಲಿಬ್ರಿವಿಲ್ಲೆ (ಗಬೊನ್), ಆ.೩೧- ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದ ಆಫ್ರಿಕಾದ ಹಲವು ದೇಶಗಳಲ್ಲಿ ಸದ್ಯ ನಿಧಾನವಾಗಿ ಸೇನಾಡಳಿತ ಚಾಲ್ತಿಗೆ ಬರುತ್ತಿದ್ದು, ಇದೀಗ ಗಬೊನ್ ಕೂಡ ಹೊಸ ಉದಾಹರಣೆಯಾಗಿದೆ. ಗಬೊನ್ ಅಧ್ಯಕ್ಷ ಅಲಿ ಬೊಂಗೊ ಅವರನ್ನು ಸದ್ಯ ಮಿಲಿಟರಿ ಆಡಳಿತವು ಗೃಹಬಂಧನದಲ್ಲಿ ಇರಿಸಿದೆ. ಈ ಮೂಲಕ ಬೊಂಗೊ ಪದಚ್ಯುತಿಯು ಗಬೊನ್ ಮೇಲಿನ ಅವರ ಕುಟುಂಬದ ೫೫ ವರ್ಷಗಳ ಸುದೀರ್ಘ ಅವಧಿಯ ಅಧಿಕಾರವನ್ನು ಕೊನೆಗೊಳಿಸಿದಂತಾಗಿದೆ.
ಈ ಬಗ್ಗೆ ತನ್ನ ಮನೆಯಿಂದಲೇ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಬೊಂಗೊ, ಸೇನಾಡಳಿತದ ನಿರ್ಧಾರದ ವಿರುದ್ದ ನನ್ನ ಬೆಂಬಲಿಗರು ಧ್ವನಿ ಎತ್ತಬೇಕಿದೆ ಎಂದು ತಿಳಿಸಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಬೊಂಗೊ ಅವರು ಗೆಲುವು ಸಾಧಿಸಿದ್ದರು. ಒಂದೆಡೆ ವಿರೋಧ ಪಕ್ಷಗಳು ಇದರಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿದರೆ ಬಳಿಕ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಸೇನಾಡಳಿತವು ದೇಶದ ಅಧಿಕಾರವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದು, ಬೊಂಗೊ ಅವರನ್ನು ಗೃಹ ಬಂಧನದಲ್ಲಿ ಇರಿಸಿದೆ. ಅಲ್ಲದೆ ಬೊಂಗೊ ಅವರ ಪುತ್ರನನ್ನು ದೇಶದ್ರೋಹ ನಡೆಸಿದ ಆರೋಪದಲ್ಲಿ ಬಂಧಿಸಲಾಗಿದೆ. ಸದ್ಯ ಬೊಂಗೊ ಅವರ ಸ್ಥಾನಕ್ಕೆ ಅಧ್ಯಕ್ಷೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬ್ರೈಸ್ ಒಲಿಗುಯಿ ನ್ಗುಮಾ ಅವರನ್ನು ನೇಮಿಸಲಾಗುವುದು ಎಂದು ಘೋಷಿಸಲಾಗಿದೆ. ಅಲ್ಲದೆ ಇದಕ್ಕೂ ಮುನ್ನ ಜನರಲ್ ಬ್ರೈಸ್ ಅವರು ರಾಜಧಾನಿ ಲಿಬ್ರೆವಿಲ್ಲೆಯ ಬೀದಿಗಳಲ್ಲಿ ವಿಜಯೋತ್ಸವ ನಡೆಸಿದ್ದರು. ಆಫ್ರಿಕಾದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಬೊಂಗೊ ಕೂಡ ಒಂದಾಗಿದ್ದು, ಅಲ್ಲದೆ ೯೦ ಪ್ರತಿಶತ ಕಾಡಿನಿಂದ ಆವೃತ್ತವಾಗಿದೆ.